HEALTH TIPS

ಕೋಟಿ ದಾಟಿದ ಶಾಲಾ ಶಿಕ್ಷಕರ ಸಂಖ್ಯೆ

ನವದೆಹಲಿ: ದೇಶದಲ್ಲಿ 2024-25ನೇ ಸಾಲಿನಲ್ಲಿ ಶಾಲಾ ಶಿಕ್ಷಕರ ಸಂಖ್ಯೆ ಒಂದು ಕೋಟಿ ದಾಟಿದೆ ಎಂದು ಶಿಕ್ಷಣ ಸಚಿವಾಲಯದ 'ಯುನೈಟೆಡ್‌ ಡಿಸ್ಟ್ರಿಕ್ಟ್‌ ಇನ್ಫರ್ಮೇಷನ್‌ ಸಿಸ್ಟಂ ಫಾರ್ ಎಜುಕೇಷನ್‌ನ (ಯುಡಿಐಎಸ್‌ಇ)' ದತ್ತಾಂಶದ ವರದಿ ತಿಳಿಸಿದೆ.

ಶಾಲಾ ಶಿಕ್ಷಕರ ಸಂಖ್ಯೆ ಕೋಟಿ ದಾಟಿರುವುದು ದೇಶದಲ್ಲಿ ಇದೇ ಮೊದಲು.

ಯುಡಿಐಎಸ್‌ಐ, ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ದತ್ತಾಂಶವನ್ನು ಕ್ರೋಢಿಕರಿಸುವ ವೇದಿಕೆಯಾಗಿದೆ. ಇದನ್ನು ಶಿಕ್ಷಣ ಸಚಿವಾಲಯ ನಿರ್ವಹಿಸುತ್ತಿದೆ.

ಶಿಕ್ಷಕರ ಸಂಖ್ಯೆಯಲ್ಲಿ ಆಗಿರುವ ಈ ಏರಿಕೆಯು ವಿದ್ಯಾರ್ಥಿ- ಶಿಕ್ಷಕರ ಅನುಪಾತದ ಸುಧಾರಣೆ ಜತೆಗೆ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸುತ್ತದೆ. ಶಿಕ್ಷಕರ ಲಭ್ಯತೆ ವಿಚಾರದಲ್ಲಿನ ಪ್ರಾದೇಶಿಕ ಅಸಮತೋಲನ ಪರಿಹರಿಸುವ ನಿಟ್ಟಿನಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

2022-23ನೇ ಸಾಲಿನಿಂದ ದತ್ತಾಂಶವನ್ನು ಗಮನಿಸಿದರೆ ಶಿಕ್ಷಕರ ಸಂಖ್ಯೆಯು ಗಣನೀಯ ಏರಿಕೆ ದಾಖಲಾಗಿದೆ. ಅಂದರೆ 2022-23ನೇ ಸಾಲಿಗೆ ಹೋಲಿಸಿದರೆ 2024-25ನೇ ಸಾಲಿನಲ್ಲಿ ಶಿಕ್ಷಕರ ಸಂಖ್ಯೆ ಶೇ 6.7ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

ವಿದ್ಯಾರ್ಥಿ-ಶಿಕ್ಷಕರ ಅನುಪಾತ ಸುಧಾರಣೆ:

ಯುಡಿಐಎಸ್‌ಐ ವರದಿಯು, ಫೌಂಡೇಷನ್‌ ಹಂತ (ಪ್ರೀಸ್ಕೂಲ್‌ನಿಂದ 2ನೇ ತರಗತವರೆಗೆ), ಪ್ರಿಪರೇಟರಿ (3ರಿಂದ 5ನೇ ತರಗತಿವರೆಗೆ), ಮಾಧ್ಯಮಿಕ (6ರಿಂದ 8ನೇ ತರಗತಿ) ಹಾಗೂ ಸೆಕೆಂಡರಿ ಹಂತಗಳಲ್ಲಿ (9ರಿಂದ 12ನೇ ತರಗತಿ) ವಿದ್ಯಾರ್ಥಿ ಶಿಕ್ಷಕರ ಅನುಪಾತವು (ಪಿಟಿಆರ್‌) ಈಗ ಕ್ರಮವಾಗಿ 10, 13, 17 ಮತ್ತು 21 ಆಗಿದೆ ಎಂದು ಮಾಹಿತಿ ನೀಡಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ವಿದ್ಯಾರ್ಥಿ- ಶಿಕ್ಷಕರ ಅನುಪಾತವನ್ನು 1:30 ಇರಬೇಕು ಎಂದು ಶಿಫಾರಸು ಮಾಡಿದೆ. ಪಿಟಿಆರ್‌ ವಿಷಯದಲ್ಲಿ ಎನ್‌ಇಪಿ ಶಿಫಾರಸ್ಸಿಗಿಂತ ಗಮನಾರ್ಹ ಸುಧಾರಣೆ ಆಗಿರುವುದನ್ನು ಯುಡಿಐಎಸ್‌ಐ ದತ್ತಾಂಶ ತೋರಿಸಿದೆ.

ಪಿಟಿಆರ್‌ನ ಸುಧಾರಣೆಯಿಂದಾಗಿ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಶಿಕ್ಷಕರು ವೈಯಕ್ತಿಕವಾಗಿ ಗಮನ ಹರಿಸಲು ಮತ್ತು ಉತ್ತಮ ಸಂವಹನ ಸಾಧಿಸಲು ಸಾಧ್ಯವಾಗುತ್ತದೆ. ಅದರ ಜತೆಗೆ ಉತ್ತಮ ಶೈಕ್ಷಣಿಕ ಫಲಿತಾಂಶಕ್ಕೂ ಕೊಡುಗೆ ನೀಡುತ್ತದೆ ಎಂದು ವರದಿ ಹೇಳಿದೆ.

ಶಾಲೆ ತೊರೆಯುವವರ ದರದಲ್ಲಿ ಇಳಿಕೆ:

2023-24ನೇ ಸಾಲಿಗೆ ಹೋಲಿಸಿದರೆ 2024-25ನೇ ಸಾಲಿನಲ್ಲಿ ಪ್ರಿಪರೇಟರಿ ಮಾಧ್ಯಮಿಕ ಮತ್ತು ಸೆಕೆಂಡರಿ ಹಂತಗಳಲ್ಲಿ ಶಾಲೆ ತೊರೆಯುವ ವಿದ್ಯಾರ್ಥಿಗಳ ದರದಲ್ಲಿ ಗಮನಾರ್ಹ ಇಳಿಕೆ ದಾಖಲಾಗಿದೆ. ಪ್ರಿಪರೇಟರಿ ಹಂತದಲ್ಲಿ ಶಾಲೆ ತೊರೆಯುವ ವಿದ್ಯಾರ್ಥಿಗಳ ದರವು ಶೇ 3.7ರಿಂದ ಶೇ 2.3ಕ್ಕೆ ಮಾಧ್ಯಮಿಕ ಹಂತದಲ್ಲಿ ಶೇ 5.2ರಿಂದ ಶೇ 3.5ಕ್ಕೆ ಹಾಗೂ ಸೆಕೆಂಡರಿ ಹಂತಗಳಲ್ಲಿ ಶೇ 10.9ರಿಂದ ಶೇ 8.2ಕ್ಕೆ ಇಳಿಕೆಯಾಗಿದೆ ಎಂದು ದತ್ತಾಂಶದ ಮಾಹಿತಿಯಿಂದ ತಿಳಿದುಬರುತ್ತದೆ.

ಮಕ್ಕಳ ಧಾರಣಾ ಸಾಮರ್ಥ್ಯ ವೃದ್ಧಿ:

ಹಿಂದಿನ ವರ್ಷಕ್ಕೆ ಹೋಲಿಸಿದರೆ 2024-25ನೇ ಸಾಲಿನಲ್ಲಿ ಮಕ್ಕಳ ಧಾರಣಾ ಸಾಮರ್ಥ್ಯವೂ ವೃದ್ಧಿಸಿದೆ. ಫೌಂಡೇಷನ್‌ ಹಂತದಲ್ಲಿ ಶೇ 98ರಿಂದ ಶೇ 98.9 ಪ್ರಿಪರೇಟರಿ ಹಂತದಲ್ಲಿ ಶೇ 85.4ರಿಂದ ಶೇ 92.4 ಮಾಧ್ಯಮಿಕ ಹಂತದಲ್ಲಿ ಶೇ 78ರಿಂದ ಶೇ 82.8 ಹಾಗೂ ಸೆಕೆಂಡರಿ ಹಂತದಲ್ಲಿ ಶೇ 45.6ರಿಂದ ಶೇ 47.2ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ದೇಶದಲ್ಲಿ ಏಕೋಪಾದ್ಯಾಯ ಶಾಲೆಗಳು ಹಿಂದಿನ ವರ್ಷಕ್ಕೆ ಹೋಲಿಸಿದೆ ಶೇ 6ರಷ್ಟು ಕಡಿಮೆಯಾಗಿದೆ. ಅದೇ ರೀತಿ ಶೂನ್ಯ ದಾಖಲಾತಿ ಶಾಲೆಗಳ ಸಂಖ್ಯೆ ಶೇ 38ರಷ್ಟು ಕುಸಿದಿದೆ ಎಂದು ವರದಿ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries