ಉಪ್ಪಳ: ಪೈವಳಿಕೆ ಸಮೀಪದ ಪರಂಬಳ ಕಯ್ಯಾರಿನ ಶ್ರೀ ಭಾರತ ಮಾತಾ ಸೇವಾ ಟ್ರಸ್ಟ್‍ನ ಸಭಾಂಗಣದಲ್ಲಿ ಆ.17ರಂದು ಭಾನುವಾರ ಬೆಳಗ್ಗೆ 7 ರಿಂದ ರಾತ್ರಿ 9ರ ವರೆಗೆ 21ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವವು ಜರಗಲಿದೆ. ಶ್ರೀ ಭಾರತ ಮಾತಾ ಸೇವಾ ಟ್ರಸ್ಟ್, ಸಂಘ ಶಕ್ತಿ, ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಮಾತೃಮಂಡಳಿ, ದುರ್ಗಾವಾಹಿನಿ, ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಪರಂಬಳ ಕಯ್ಯಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 7ಕ್ಕೆ ದೀಪ ಪ್ರಜ್ವಲನೆ, ಕಾರ್ಯಕ್ರಮಗಳ ಉದ್ಘಾಟನೆ, ಸ್ಥಳೀಯರಿಂದ ಭಜನೆ, 9.30 ರಿಂದ ರಾಧಾ-ಕೃಷ್ಣ ವೇಷ ಪ್ರದರ್ಶನ ಮತ್ತು ನೃತ್ಯ, 11 ರಿಂದ ಬಾಲಕರಿಗೆ, ಬಾಲಕಿಯರಿಗೆ, ಮಾತೆಯರಿಗೆ, ಮಹನೀಯರಿಗೆ ಪ್ರತ್ಯೇಕವಾಗಿ ವಿವಿಧ ಸ್ಪರ್ಧೆಗಳು ಆರಂಭ, ಮಧ್ಯಾಹ್ನ 1 ರಿಂದ ಅನ್ನದಾನ ನೆರವೇರಲಿದೆ.
ಅಪರಾಹ್ನ 2ಕ್ಕೆ ಜರಗುವ ಧಾರ್ಮಿಕ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್‍ನ ಕಾಸರಗೋಡು ಜಿಲ್ಲಾ ಕೋಶಾಧಿಕಾರಿ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಸುಜಾತ ಎಸ್. ಧಾರ್ಮಿಕ ಭಾಷಣ ಮಾಡುವರು. ವಿವಿಧ ವಲಯಗಳ ಪ್ರಮುಖರಾದ ಬಾಲಕೃಷ್ಣ ಶೆಟ್ಟಿ ಪಾವಳಗುತ್ತು ವರ್ಕಾಡಿ, ವಿಠಲ ಶೆಟ್ಟಿ ಕುದ್ವ ಪೆರ್ಲ, ಶಿವಪ್ರಸಾದ್ ಸಿ. ಮಂಡೆಕಾಪು, ರಾಜೀವಿ ಶೆಟ್ಟಿಗಾರ್ ಕಯ್ಯಾರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಇದೇ ಸಂದರ್ಭ ಡಿ.ವಿಷ್ಣು ಆಚಾರ್ಯ ಧರ್ಮತ್ತಡ್ಕ ಅವರನ್ನು ಗೌರವಿಸಲಾಗುವುದು. ಜೊತೆಗೆ 2024-25ನೇ ಶೈಕ್ಷಣಿಕ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎ ಪ್ಲಸ್ ಗ್ರೇಡ್‍ಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ಸಂಜೆ 4 ರಿಂದ ಮಡಿಕೆ ಒಡೆಯುವುದು ಸಹಿತ ವಿವಿಧ ಸ್ಪರ್ಧೆಗಳ ಮುಂದುವರಿಕೆ ಹಾಗೂ ಕೊನೆಯಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನಗಳ ವಿತರಣೆ ನಡೆಯಲಿದೆ

