HEALTH TIPS

ಗಾಜಾದಲ್ಲಿ ಕದನ ವಿರಾಮ ಪ್ರಸ್ತಾಪಿಸಿದ ಹಮಾಸ್‌: ಅಧ್ಯಯನ ಮಾಡಿ ನಿರ್ಧಾರ;ಇಸ್ರೇಲ್

ಜೆರುಸಲೇಂ/ಕೈರೊ: ಗಾಜಾದಲ್ಲಿ 60 ದಿನಗಳ ಕದನ ವಿರಾಮ ಪ್ರಸ್ತಾಪಿಸಿರುವ ಹಮಾಸ್‌ ಪ್ರಸ್ತಾವವನ್ನು ಅಧ್ಯಯನ ಮಾಡಲಾಗುತ್ತಿದೆ ಎಂದು ಇಸ್ರೇಲ್‌ ತಿಳಿಸಿದೆ. 

ಗಾಜಾ ನಗರದ ನಿಯಂತ್ರಣವನ್ನು ಸಂಪೂರ್ಣವಾಗಿ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಮತ್ತಷ್ಟು ದಾಳಿ ತೀವ್ರಗೊಳಿಸಲಾಗುವುದು ಎಂದು ಇಸ್ರೇಲ್‌ ಕಳೆದ ವಾರ ಘೋಷಿಸಿತ್ತು.

ಇದರ ಬೆನ್ನಲ್ಲೇ, ಅಮೆರಿಕದ ಬೆಂಬಲದೊಂದಿಗೆ ಕದನ ವಿರಾಮಕ್ಕೆ ಈಜಿಪ್ಟ್‌ ಹಾಗೂ ಕತಾರ್‌ ದೇಶಗಳು ಪರೋಕ್ಷ ಮಾತುಕತೆ ನಡೆಸಲು ಮುಂದಾಗಿವೆ.

'ಹಮಾಸ್‌ನ ಒತ್ತೆಯಾಳಾಗಿರುವ ಇಸ್ರೇಲ್‌ನ 10 ಜೀವಂತ ವ್ಯಕ್ತಿಗಳು ಹಾಗೂ 18 ಮಂದಿಯ ಮೃತದೇಹಗಳ ಹಸ್ತಾಂತರಕ್ಕೆ ಪ್ರತಿಯಾಗಿ ಜೈಲಿನಲ್ಲಿ ಬಂಧಿಯಾಗಿರುವ ಪ್ಯಾಲೆಸ್ಟೀನ್‌ನ 200 ಮಂದಿ ಕೈದಿಗಳು, ಮಹಿಳೆಯರು, ಮಕ್ಕಳನ್ನು ಬಿಡುಗಡೆಗೊಳಿಸುವ ಪ್ರಸ್ತಾವ ಸಿದ್ಧಗೊಂಡಿದೆ' ಎಂದು ಹಮಾಸ್‌ ತಿಳಿಸಿತ್ತು.

ಪ್ರಸ್ತಾವ ಸಿದ್ಧವಾಗಿದೆ ಎಂದು ಈಜಿಪ್ಟ್‌ನ ಭದ್ರತಾ ಪಡೆಗಳು ಖಚಿತಪಡಿಸಿವೆ. ಇದಕ್ಕೆ ಪ್ರತಿಯಾಗಿ, ಗಾಜಾದಲ್ಲಿ ಬಂಧಿಸಿರುವ ನೂರಾರು ಮಂದಿಯನ್ನು ಬಿಡುಗಡೆಗೊಳಿಸಬೇಕು ಎಂದು ಹಮಾಸ್‌ ಒತ್ತಾಯಿಸಿದೆ.

ಶೇಕಡ 75 ಗಾಜಾ ನಿಯಂತ್ರಣ: ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ ಪಡೆಗಳು ಶೇಕಡ 75ರಷ್ಟು ಹಿಡಿತ ಸಾಧಿಸಿದ್ದು, ಅಲ್ಪ ಪ್ರಮಾಣದಲ್ಲಿ ಇಸ್ರೇಲ್‌ ಪಡೆಗಳು ಹಿಂದಕ್ಕೆ ಪಡೆಯಬೇಕು ಎಂಬ ಪ್ರಸ್ತಾವವನ್ನು ಹಮಾಸ್‌ ಮುಂದಿಟ್ಟಿದೆ. ಅಮೆರಿಕದ ವಿಶೇಷ ಮಧ್ಯಪ್ರಾಚ್ಯ ರಾಯಭಾರಿ ಸ್ಟೀವ್‌ ವಿಟ್ಕೋಫ್‌ ನೇತೃತ್ವದಲ್ಲಿ ಒಪ್ಪಂದದ ರೂಪುರೇಷೆಗೆ ಇಸ್ರೇಲ್‌ ಒಪ್ಪಿಗೆ ಸೂಚಿಸಿತ್ತು.

'60 ದಿನಗಳ ಕದನ ವಿರಾಮವು ಯುದ್ಧ ಕೊನೆಗಾಣಿಸಲು ಸಮಗ್ರ ಒಪ್ಪಂದಕ್ಕೆ ಮಾರ್ಗವಾಗಿದೆ' ಎಂದು ಕತಾರ್‌ನ ವಿದೇಶಾಂಗ ಇಲಾಖೆಯ ವಕ್ತಾರ ಮಜೆದ್‌ ಅಲ್‌ ಅನ್ಸಾರಿ ತಿಳಿಸಿದ್ದಾರೆ.

20 ಮಂದಿ ಬಲಿ: 'ಕದನ ವಿರಾಮ ಪ್ರಸ್ತಾವದ ಹೊರತಾಗಿಯೂ ಮಂಗಳವಾರವು ಗಾಜಾದ ಮೇಲೆ ಇಸ್ರೇಲ್ ವಾಯು ದಾಳಿ ಮುಂದುವರಿಸಿದ್ದು, 20 ಮಂದಿ ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ' ಎಂದು ಗಾಜಾದ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪರ- ವಿರೋಧ: ಹಮಾಸ್‌ ಮುಂದಿಟ್ಟಿರುವ ಪ್ರಸ್ತಾವದಂತೆ ಕದನ ವಿರಾಮಕ್ಕೆ ಮುಂದಾಗಬೇಕು ಎಂದು ಇಸ್ರೇಲ್‌ನ ನಾಗರಿಕರು ಒತ್ತಾಯಿಸಿದ್ದಾರೆ. ಈ ಕುರಿತು ಆದಷ್ಟು ಶೀಘ್ರ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರು ಸಭೆ ನಡೆಸಲು ಮುಂದಾಗಿದ್ದಾರೆ ಎಂದು ಇಸ್ರೇಲ್‌ನ ಹಿರಿಯ ಇಬ್ಬರು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಹಮಾಸ್‌ ಬಂಡುಕೋರರನ್ನು ಸಂಪೂರ್ಣವಾಗಿ ಮಣಿಸುವ ತನಕ ಯಾವುದೇ ಕಾರಣಕ್ಕೂ ಕದನ ವಿರಾಮಕ್ಕೆ ಒಪ್ಪಿಕೊಳ್ಳಬಾರದು ಎಂದು ನೆತಾನ್ಯಾಹು ಸರ್ಕಾರ ಬೆಂಬಲಿಸುತ್ತಿರುವ ಬಲಪಂಥೀಯ ಸಚಿವರಾದ ಬೆಝಲೆಲ್ ಸ್ಮಾರ್ಟಿಜ್‌, ಇತಾಮರ್‌ ಬೆನ್‌ಗ್ವಿರ್‌ ಒತ್ತಾಯಿಸಿದ್ದಾರೆ.

ಇಸ್ರೇಲ್‌ ಮೇಲೆ ಹಮಾಸ್‌ ಬಂಡುಕೋರರು ದಾಳಿ ನಡೆಸಿ, 1,200 ಇಸ್ರೇಲಿಗರನ್ನು ಹತ್ಯೆ ಮಾಡಿದ್ದು, 251 ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡಿದೆ. ಪ್ರತಿದಾಳಿ ನಡೆಸಿದ ಇಸ್ರೇಲ್‌ ಇದುವರೆಗೂ 61 ಸಾವಿರ ಪ್ಯಾಲೆಸ್ಟೀನಿಯನ್ನರನ್ನು ಹತ್ಯೆಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries