ನವದೆಹಲಿ: ಪ್ರೆಸ್ ಕ್ಲಬ್ ಆಫ್ ಇಂಡಿಯಾ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ಇಟ್ಟು ಪೂಜಿಸಿರುವ ಹಾಗೂ ಹನುಮಾನ್ ಚಾಲೀಸಾದಂತೆ 'ಮೋದಿ ಚಾಲೀಸಾ' ಪಠಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ, ತನಗೂ ಈ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ ಎಂದು ಪ್ರೆಸ್ ಕ್ಲಬ್ ಸ್ಪಷ್ಟಪಡಿಸಿದೆ.
ಮೋದಿ ಅವರನ್ನು ಶ್ರೀರಾಮನ ಅವತಾರದಲ್ಲಿ ನಿಲ್ಲಿಸಿ, ಕೈಯಲ್ಲಿ ಬಿಲ್ಲು, ಬಾಣಗಳನ್ನಿಟ್ಟು ನಿಲ್ಲಿಸಿರುವ ಹಾಗೂ ಅದರ ಸುತ್ತಲೂ ಕೆಲವರು ಭಕ್ತಿಯಿಂದ ಹಾಡುತ್ತಿರುವ ವಿಡಿಯೊಗಳು, ಚಿತ್ರಗಳನ್ನು ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರೆಸ್ ಕ್ಲಬ್, 'ಪ್ರೆಸ್ ಕ್ಲಬ್ ಆಫ್ ಇಂಡಿಯಾ ಕಚೇರಿ ಆವರಣದಲ್ಲಿ ಇಂದು (ಗುರುವಾರ) ನಡೆದ ಕಾರ್ಯಕ್ರಮದ ಫೋಟೊ ಹಾಗೂ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ್ದೇವೆ. ಈ ಕಾರ್ಯಕ್ರಮವನ್ನು ಕ್ಲಬ್ ಆಯೋಜಿಸಿರಲಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ' ಎಂದಿದೆ.
'ಪತ್ರಿಕಾಗೋಷ್ಠಿ ನಡೆಸುವ ಉದ್ದೇಶದಿಂದ ಒಂದು ಸಂಸ್ಥೆಯು ಸಭಾಂಗಣವನ್ನು ಬಾಡಿಗೆ ಪಡೆದಿತ್ತು. ಆದರೆ, ಬಾಡಿಗೆ ಪಡೆದ ಸ್ಥಳದ ಬಳಕೆಗೆ ಸಂಬಂಧಿಸಿದಂತೆ ಇರುವ ಷರತ್ತುಗಳನ್ನು ಉಲ್ಲಂಘಿಸಿರುವುದು ತಿಳಿಯುತ್ತಿದ್ದಂತೆ, ಕ್ಲಬ್ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ, ಆ ಚಟುವಟಿಕೆಯನ್ನು ನಿಲ್ಲಿಸಿದರು' ಎಂದು ಮಾಹಿತಿ ನೀಡಿದೆ.
'ಮೋದಿಗೆ ದೇವಾಲಯ'
ಬಿಹಾರ ರಾಜ್ಯ ತೃತೀಯ ಲಿಂಗಿ ಕಲ್ಯಾಣ ಮಂಡಳಿಯು ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಅದರ ಸಂಘಟಕ ಹಾಗೂ ಮಂಡಳಿಯ ಉಪಾಧ್ಯಕ್ಷ ರಾಜನ್ ಸಿಂಗ್ ಅವರು, ಬಿಹಾರದಲ್ಲಿ ಮೋದಿಗಾಗಿ ದೇವಾಲಯ ನಿರ್ಮಿಸಲು ಯೋಜಿಸಿದ್ದೇವೆ ಎಂದಿದ್ದಾರೆ.
'ತೃತೀಯ ಲಿಂಗಿ ಸಮುದಾಯವು ತನ್ನ ಹಕ್ಕುಗಳನ್ನು ಪಡೆಯುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಖಾತ್ರಿಪಡಿಸಿದ್ದಾರೆ. ಇದು ದೇಶದ ಇತಿಹಾಸದಲ್ಲೇ ಮೊದಲು. ನಾವು ಅವರಿಗೆ ದೇವಾಲಯ ನಿರ್ಮಿಸಲು ಬಯಸಿದ್ದೇವೆ. ಅದರಲ್ಲಿ ತಪ್ಪೇನಿದೆ?' ಎಂದು ಪ್ರಶ್ನಿಸಿದ್ದಾರೆ.
'ಬಿಹಾರ ರಾಜ್ಯ ತೃತೀಯ ಲಿಂಗಿ ಕಲ್ಯಾಣ ಮಂಡಳಿಯು ಭಗವಂತ ಶ್ರೀ ನರೇಂದ್ರ ಮೋದಿ ಅವರಿಗಾಗಿ ಐದು ಎಕರೆ ಪ್ರದೇಶದಲ್ಲಿ ₹ 112 ಕೋಟಿ ವೆಚ್ಚದಲ್ಲಿ ಬೃಹತ್ ದೇವಾಲಯವನ್ನು ನಿರ್ಮಿಸಲಿದೆ' ಎಂದು ತಿಳಿಸಿದ್ದಾರೆ.
ಪ್ರಧಾನಿ ಅವರನ್ನು ದೇವರಂತೆ ಬಿಂಬಿಸುತ್ತಿರುವುದಕ್ಕೆ ಎದುರಾಗಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು, 'ಆ ಕುರಿತು ಯಾರೂ ಟೀಕೆ ಮಾಡಬಾರದು. ಈ ಸರ್ಕಾರವು ಮೊದಲ ಸಲ ತೃತೀಯ ಲಿಂಗಿಗಳಿಗೆ ಹಕ್ಕುಗಳನ್ನು ನೀಡಿದೆ. ಅವರಿಗೆ ಉದ್ಯೋಗವೂ ಸಿಗುತ್ತಿದೆ' ಎಂದು ಪ್ರತಿಪಾದಿಸಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಯಲ್ಲಿ ಲಿಂಗದ ಸ್ವಯಂ ಗುರುತಿಸಿಕೊಳ್ಳುವಿಕೆಯನ್ನು ರದ್ದುಗೊಳಿಸಿರುವುದು ಟೀಕೆಗೆ ಗುರಿಯಾಗಿದೆ. ಈ ಕುರಿತಾಗಿಯೂ ಮಾತನಾಡರುವ ಸಿಂಗ್, 'ತೃತೀಯ ಲಿಂಗಿಗಳು ಕಾಯ್ದೆಯನ್ನು ವಿರೋಧಿಸುತ್ತಿಲ್ಲ. ವಿರೋಧ ಪಕ್ಷಗಳಷ್ಟೇ ಟೀಕಿಸುತ್ತಿವೆ' ಎಂದು ಕಿಡಿಕಾರಿದ್ದಾರೆ.

