ನವದೆಹಲಿ: ದೆಹಲಿಯಲ್ಲಿ ಇತ್ತೀಚೆಗೆ ಪ್ರತಿಭಟನಕಾರರ ಮೇಲಿನ ಪೊಲೀಸರ ದೌರ್ಜನ್ಯ ಮತ್ತು ಪೊಲೀಸ್ ಸಿಬ್ಬಂದಿ ವಿರುದ್ಧದ ಹಿಂಸಾಚಾರದ ಆರೋಪಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್, ನಿವೃತ್ತ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ನೇತೃತ್ವದಲ್ಲಿ ಐದು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು, ಈ ಸಮಿತಿಯಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರವಿಶಂಕರ್ ಝಾ, ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಾಲಿಂದರ್ ಕೌರ್, ಸಿಬಿಐ ಮಾಜಿ ನಿರ್ದೇಶಕ ರಿಷಿ ಕುಮಾರ್ ಶುಕ್ಲಾ ಮತ್ತು ಮೇಘಾಲಯದ ನಿವೃತ್ತ ಡಿಜಿಪಿ ಎಲ್.ಆರ್. ಬಿಷ್ಣೋಯ್ ಇರಲಿದ್ದಾರೆ ಎಂದು ತಿಳಿಸಿದೆ.
ಸಮಿತಿಯ ಸದಸ್ಯರಿಗೆ ಗೌರವಧನ ನೀಡಲಾಗುವುದು ಮತ್ತು ಇದರ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಸಮಿತಿಯು ಅಗತ್ಯವಿರುವ ಕಾರ್ಯದರ್ಶಿಯನ್ನು ನೇಮಿಸಿಕೊಳ್ಳಬಹುದು ಎಂದು ಕೋರ್ಟ್ ಹೇಳಿದೆ.
ಜು.20ರಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ 'ಸಂಸತ್ ಚಲೊ' ಹಮ್ಮಿಕೊಂಡಿದ್ದ ವೇಳೆ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್‌ಗಳ ಬಳಕೆ ಸೇರಿದಂತೆ ಪೊಲೀಸರ ದೌರ್ಜನ್ಯ ಮತ್ತು ಪೊಲೀಸ್ ಸಿಬ್ಬಂದಿ ವಿರುದ್ಧದ ಹಿಂಸಾಚಾರದ ಆರೋಪಗಳನ್ನು ಪರಿಶೀಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.
'ಉನ್ನತಾಧಿಕಾರ ಸಮಿತಿಗೆ ಸತ್ಯಶೋಧನೆಯ ಜವಾಬ್ದಾರಿ ವಹಿಸಲಾಗುವುದು. ಸಂತ್ರಸ್ತ ವ್ಯಕ್ತಿಯು ಸಮಿತಿಯನ್ನು ಸಂಪರ್ಕಿಸಿದ ಕೂಡಲೇ ಅವರ ಅಳಲನ್ನು ಸಮಿತಿ ಆಲಿಸಲಿದೆ ಎಂಬ ಭರವಸೆ ನಮಗಿದೆ. ಸಮಿತಿಯು ಕಾಲಕಾಲಕ್ಕೆ ನೀಡುವ ಶಿಫಾರಸುಗಳ ಆಧಾರದ ಮೇಲೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಸುಪ್ರೀಂ ಕೋರ್ಟ್ ಈಚೆಗೆ ತಿಳಿಸಿತ್ತು.
'ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಸಾಮಾಜಿಕ ಮಾಧ್ಯಮಗಳ ಮೂಲಕ ಸಂತ್ರಸ್ತರ ತೇಜೋವಧೆಯ ಪ್ರಯತ್ನಗಳನ್ನೂ ಸಮಿತಿಯು ಪರಿಶೀಲನೆಗೆ ಒಳಪಡಿಸಲಿದೆ' ಎಂದು ನ್ಯಾಯಪೀಠ ಹೇಳಿತ್ತು.

