ಕಾಸರಗೋಡು: ಸ್ಕೂಟರಲ್ಲಿ ತೆರಳಿ ಪಾದಚಾರಿ ಮಹಿಳೆಯರ ಕತ್ತಿನಿಂದ ಚಿನ್ನದ ಸರ ಕಸಿದು ಪರಾರಿಯಾಗುತ್ತಿದ್ದ ಇಬ್ಬರನ್ನು ಬೇಕಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉದುಮ ಪಾಕ್ಯಾರ ವೆಡಿಕ್ಕರ ನಿವಾಸಿ ಮಹಮ್ಮದ್ ಇಜಾಸ್ ಹಾಗೂ ಕಳನಾಡು ಕೀಯೂರು ಸಣ್ಣ ಮಸೀದಿ ಸನಿಹದ ನಿವಾಸಿ ಪ್ರಸಕ್ತ ಪೆರುಂಬಳ ಕೋಳಿಯಡ್ಕದ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿರುವ ಮಹಮ್ಮದ್ ಶಂನಾಜ್ ಬಂಧಿತರು.
ಇವರಲ್ಲಿ ಮಹಮ್ಮದ್ ಇಜಾಸ್ ವಿರುದ್ಧ ಬೇಕಲ, ಬೇಡಡ್ಕ, ಹೊಸದುರ್ಗ, ತಳಿಪರಂಬ, ಮಂಗಳೂರು ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಿನ್ನದ ಸರ ಕಸಿತ ಸೇರಿದಂತೆ ವಿವಿಧ ಪ್ರಕರಣ ದಾಖಲಾಗಿದೆ. ಈತನನ್ನು ಈ ಹಿಂದೆ'ಕಾಪಾ'ಅನ್ವಯ ಬಂಧಿಸಲಾಗಿತ್ತು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಬೇಕಲ ಡಿವೈಎಸ್‍ಪಿ ವಿ.ವಿ ಮನೋಜ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದೆ.
ಮಹಮ್ಮದ್ ಶಂನಾಸ್ ವಿರುದ್ಧ ನ್ಯೂ ಮಾಹಿ, ತಲಶ್ಯೇರಿ, ಕೂತುಪರಂಬ ಸೇರಿದಂತೆ ವಿವಿಧೆಡೆ 15ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಚಿನ್ನದ ಸರ ಕಸಿತ, ಮಾದಕ ದ್ರವ್ಯ ಸಾಗಾಟವೂ ಒಳಗೊಂಡಿದೆ. ಆಗಸ್ಟ್ 5ರಂದು ನ್ಯೂ ಮಾಹಿ ಪೊಲೀಸ್ ಠಾಣೆ ವ್ಯಾಪ್ತಿಯ ಮೂವರು ಮಹಿಳೆಯರ ಕತ್ತಿನಿಂದ ಚಿನ್ನದ ಸರ ಕಸಿದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಹೆಲ್ಮೆಟ್ ಧರಿಸಿ ಮಹಿಳೆಯರ ಕತ್ತಿನಿಂದ ಸರ ಕಸಿಯುತ್ತಿದ್ದನು. ಸರಕಳವು ನಡೆಸಿರುವ ಹಲವು ಪ್ರಕರಣಗಳಲ್ಲಿ ಶಾಮೀಲಾಗಿದ್ದ ಈತನ ಚಲನವಲನವನ್ನು ಸಿಸಿ ಕ್ಯಾಮರಾದಲ್ಲಿ ತಪಾಸಣೆ ನಡೆಸುವ ಮೂಲಕ ಬಂಧಿಸಲಾಗಿದೆ.

