ಕಾಸರಗೋಡು: ಜಿಲ್ಲೆಯ ಅಡಕೆ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿರುವುದಾಗಿ ಕೇರಳ ಕೃಷಿ ಸಚಿವ ಪಿ. ಪ್ರಸಾದ್ ರಾಜ್ಯ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಕಾಸರರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ವಿಧಾನಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಅಡಕೆ ಕೃಷಿಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದರು. ಕಾಸರಗೋಡಿನಲ್ಲಿ ಅಡಕೆ ಬೆಳೆಗೆ ಬಾಧಿಸುವ ಮಹಾಳಿ ರೋಗ, ಎಲೆ ಚುಕ್ಕಿ ರೋಗದ ಬಗ್ಗೆಯೂ ಗಮನ ಸೆಳೆದಿದ್ದರು. ಅತಿಯಾದ ಮಳೆಯಿಂದ ಈ ಬಾರಿ ಅಡಕೆ ಕೃಷಿ ನೆಲಕಚ್ಚುವಂತಾಗಿದೆ. ಬೋರ್ಡೋ ದ್ರಾವಣ ಸಿಂಪಡಿಸಿದರೂ, ರೋಗ ಹತೋಟಿಗೆ ತರಲು ಸಾಧ್ಯವಾಗದೆ ಇಳುವರಿ ಗಣನೀಯವಾಗಿ ಕುಸಿದಿದೆ. ಇದರಿಂದ ಕೃಷಿಕರಿಗೆ ಸೂಕ್ತ ಪರಿಹಾರ Pಒದಗಿಸಿಕೊಡಲು ಸರ್ಕಾರ ಮುಂದಾಗಬೇಕು, ಕೃಷಿಕರ ಸಾಲಕ್ಕೆ ಮೊರಟೋರಿಯಂ ಘೋಷಿಸಬೇಕು, ಕೃಷಿಕರಿಗೆ ಅಗತ್ಯವಿರುವ ವಿದ್ಯುತ್ ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಬೇಕು, ಕೃಷಿಗೆ ಆಧುನಿಕ ಉಪಕರಣ ಖರೀದಿಗೆ ಸಬ್ಸಿಡಿ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದರು.
ಜಿಲ್ಲೆಯಲ್ಲಿ ಅಡಕೆ ಕೃಷಿಯನ್ನು ಪ್ರೋತ್ಸಾಹಿಸಲು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅನ್ವಯ ಪ್ರತ್ಯೇಕ ಯೋಜನೆ ರಚಿಸಲಾಗುವುದು. ಮತ್ತಷ್ಟು ಕೃಷಿಕರನ್ನು ಕೃಷಿ ವಿಮೆಯಲ್ಲಿ ಸೇರ್ಪಡೆಗೊಳಿಸಲಾಗುವುದು. ಈಮೂಲಕ ಕೃಷಿ ನಾಶಗೊಂಡ ಕೃಷಿಕರಿಗೆ ಕನಿಷ್ಠ ತಲಾ ಒಂದು ಲಕ್ಷ ರೂ. ನಷ್ಟ ಪರಿಹಾರ ಲಭ್ಯವಾಗಲಿದೆ. ಕಾಸರಗೋಡು ಜಿಲ್ಲೆಯ 35ಕೃಷಿ ಭವನಗಳ ಮೂಲಕ ಕೃಷಿಕರಿಗೆ ಸೌಲಭ್ಯ ಲಭ್ಯವಾಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅಡಕೆ ಕೃಷಿಗೆ ಪ್ರೋತ್ಸಾಹ ನೀಡಲು ಕೃಷಿ ಇಲಾಖೆ, ಕೇಂದ್ರ ತೋಟಗಾರಿಕಾ ಇಲಾಖೆ, ಕೃಷಿ ವಿಶ್ವ ವಿದ್ಯಾಲಯದ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಕಾಸರಗೋಡಿನ ಶಾಸಕರು, ಜಿಲ್ಲಾಧಿಕಾರಿ ಹಾಗೂ ಕೃಷಿ ವಿಜ್ಞಾನಿಗಳ ನೇತೃತ್ವದಲ್ಲಿ ಬದಿಯಡ್ಕದಲ್ಲಿ ಸಭೆ ನಡೆಸಿ ಅಡಕೆ ಕೃಷಿಕರ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಗಿದೆ. ಅಡಕೆ ಮರಗಳಿಗೆ ತಗಲುವ ಮಹಾಳಿ ರೋಗದ ಪರಿಹಾರಕ್ಕಾಗಿ ದ.ಕ ಜಿಲ್ಲೆಯ ತೋಟಗಾರಿಕಾ ಇಲಾಖೆ ಸಹಕಾರದೊಂದಿಗೆ ಮುಂದುವರಿಯಲು ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಸಚಿವರು ಉತ್ತರಿಸಿದರು.

