ಕಾಸರಗೋಡು: ಹಿಂದೂ ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯ ಎಂಬುದಾಗಿ ಚಿನ್ಮಯ ಮಿಷನ್ ಕೇರಳ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ತಿಳಿಸಿದ್ದಾರೆ. ಅವರು ಕೇರಳ ಮಾರ್ಗದರ್ಶಕ ಮಂಡಳಿ ವತಿಯಿಂದ ಕೊಳತ್ತೂರು ಅದ್ವೈತಾಶ್ರಮದ ಮಠಾಧೀಶ, ಮಾರ್ಗದರ್ಶಕ ಮಂಡಳಿ ಪ್ರಾಂತ್ಯಾಧ್ಯಕ್ಷ ಶ್ರೀ ಚಿದಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ಧರ್ಮಸಂದೇಶ ಯಾತ್ರೆಯ ಪೂರ್ವಭಾವಿಯಾಗಿ ವಿದ್ಯಾನಗರದ ಚಿನ್ಮಯ ಸಿ.ಬಿ.ಸಿ ಸಭಾಂಗಣದಲ್ಲಿ ನಡೆದ ಧರ್ಮರಕ್ಷ ಸಂಗಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಧರ್ಮದ ಬಗ್ಗೆ ಎಳವೆಯಿಂದಲೇ ಮಕ್ಕಳಿಗೆ ಬೋಧನೆ ನಡೆಸಬೇಕಾದ ಅನಿವಾರ್ಯತೆಯಿದೆ. ಹಿಂದೂ ಧರ್ಮ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಂದ ಮುಕ್ತಿ ಲಭಿಸಬೇಕಾದರೆ, ಪ್ರತಿಯೊಬ್ಬ ಹಿಂದೂ ಜಾಗೃತನಾಗಬೇಕು ಎಂದು ತಿಳಿಸಿದರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸವಾಮೀಜಿ ಧರ್ಮರಕ್ಷಾ ಸಂಗಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸ್ವಾಮಿ ಸತ್‍ಸ್ವರೂಪಾನಂದ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಸ್ವಾಮಿ ಅಯ್ಯಪ್ಪದಾಸ ಸ್ವಾಮೀಜಿ, ಸಾಧು ವಿನೋದ್, ಸ್ವಾಮಿ ತತ್ವಾನಂದ ಸರಸ್ವತಿ, ವೇದವೇದಾಮೃತಾನಂದ ಚೈತನ್ಯ, ಬ್ರಹ್ಮಕುಮಾರಿ ವಿಜಯಲಕ್ಷ್ಮಿ, ಮಧುಸೂಧನ್ ಅಯರ್, ಸಬ್ರಹ್ಮಚಾರಿಣಿ ದಿಶಾ ಚೈತನ್ಯ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಿಂದ ಸೋಮವಾರ ದೀಪ ಪ್ರಜ್ವಲನೆಗೊಳಿಸಿ ಕಾಸರಗೋಡಿಗೆ ಆಗಮಿಸಿದ್ದ ಯತಿವರ್ಯರು ಮಂಗಳವಾರ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದ ನಂತರ ಚಿನ್ಮಯ ಕ್ಯಾಂಪಸ್‍ಗೆ ಆಗಮಿಸಿದ್ದರು.



