ಬದಿಯಡ್ಕ: ಹಿರಿಯ ಸಾಹಿತಿ, ನಾಡೋಜ, ಡಾ. ಕಯ್ಯಾರ ಕಿಞಣ್ಣ ರೈ ಅವರ ನಾಮಧೇಯದಲ್ಲಿ ಅವರ ಹುಟ್ಟೂರು ಪೆರಡಾಲ ಕವಿತಾ ಕುಟೀರ ಸನಿಹ ನಿರ್ಮಾಣಗೊಳ್ಳುತ್ತಿರುವ 'ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಕನ್ನಡ ಸಂಸ್ಕøತಿ ಭವನದ ಕಾಮಗಾರಿ ಬಹುತೇಕ ಪೂರ್ತಿಗೊಂಡಿದ್ದು, ಅ.27ರಂದು ಲೋಕಾರ್ಪಣೆಯಾಗಲಿದೆ. ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಈ ಭವನ ನಿರ್ಮಾಣವಾಗಿದ್ದು, ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಡಾ. ಕಯ್ಯಾರ ಸಂಸ್ಕøತಿ ಭವನ ಉದ್ಘಾಟಿಸಲು ತೀರ್ಮಾನಿಸಲಾಗಿದೆ.
ನಾಡೋಜ ಕವಿಗೆ ಭವ್ಯ ಭವನ:
'ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ'ಎಂದು ಕಾಸರಗೋಡಿನ ಕನ್ನಡಿಗರಿಗಾದ ಅನ್ಯಾಯದ ವಿರುದ್ಧ ಹಾಗೂ ಕನ್ನಡ ಭಾಷೆ-ಸಂಸ್ಕøತಿಗಾಗಿ ತಮ್ಮ ಜೀವಮಾನವಿಡೀ ಹೋರಾಟ ನಡೆಸಿರುವ ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ಹೆಸರಲ್ಲಿ ನಿರ್ಮಾಣಗೊಂಡಿರುವ ಭವ್ಯ ಭವನ ಕರ್ನಾಟಕ ಸರ್ಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಎರಡು ಕೋಟಿ ರೂ. ಅನುದಾನದೊಂದಿಗೆ ಪ್ರಾಧಿಕಾರದ ಉಸ್ತುವಾರಿಯಲ್ಲಿ ಕಾಮಗಾರಿ ನಡೆಯುತ್ತಿದೆ. ದ.ಕ ಜಿಲ್ಲಾ ನಿರ್ಮಿತಿ ಕೇಂದ್ರ, ಕನ್ನಡ ಸಾಂಸ್ಕøತಿಕ ಭವನದ ಕಾಮಗಾರಿಯನ್ನು ನಡೆಸಿಕೊಡುತ್ತಿದೆ. ಕವಿತಾ ಕುಟೀರ(ರಿ)ಪೆರಡಾಲದ ಕಟ್ಟಡ ನಿರ್ಮಾಣ ಸಮಿತಿಯ ಸಂಪೂರ್ಣ ಸಹಕಾರದೊಂದಿಗೆ ಈ ಮಹತ್ತರ ಯೋಜನೆಯೊಂದು ಜಾರಿಯಾಗುತ್ತಿದೆ. ಕವಿತಾ ಕುಟೀರ ಕಟ್ಟಡ ನಿರ್ಮಾಣ ಸಮಿತಿಯಲ್ಲಿ ಡಾ. ಎಂ. ಮೋಹನ ಆಳ್ವ ಮೂಡಬಿದಿರೆ, ಉದ್ಯಮಿ ಡಾ. ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಅಜಿತ್ ಕುಮಾರ್ ಮಾಲಾಡಿ ಅಲ್ಲದೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯವರೂ ಸದಸ್ಯರಾಗಿರುತ್ತಾರೆ.
ಸುಸಜ್ಜಿತ ವೇದಿಕೆ, ಎರಡು ಕೊಠಡಿ, ಕಚೇರಿ, ತಳಭಾಗದಲ್ಲಿ ಸಭಾಂಗಣ ಹಾಗೂ ಮೇಲ್ಮಹಡಿಯಲ್ಲಿ ಅರ್ಧ ಭಾಗಕ್ಕೆ ಬಾಲ್ಕನಿ ಒಳಗೊಂಡ ಕಟ್ಟಡ ಕಾಮಗಾರಿ ಅಂತಿಮ ಹಂತದಲ್ಲಿದೆ. ಪೆರಡಾಲ ಕಲ್ಲಕಳಯದ ಎತ್ತರದ ಪ್ರದೇಶದಲ್ಲಿ ತಲೆಯೆತ್ತಿರುವ ಈ ಭವ್ಯ ಭವನದ ಸುತ್ತು ಆವರಣಗೋಡೆ, ಅತಿಥಿಗೃಹ, ಸರ್ವಋತು ಸಂಚಾರದ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಡೆಸಬೇಕಾಗಿದೆ. ಬದಿಯಡ್ಕ ಪೇಟೆಯಿಂದ ಬೆಳಿಂಜ ರಸ್ತೆಯ ಒಂದುವರೆ ಕಿ.ಮೀ ದೂರದಲ್ಲಿ ಸುಸಜ್ಜಿತ ಭವನ ನಿರ್ಮಾಣಗೊಂಡಿದೆ. ಉಳಿದಿರುವ ಕಾಮಗಾರಿಯನ್ನು ಪೂರ್ತಿಗೊಳಿಸುವುದರ ಜತೆಗೆ ಜಾಗದ ದಾಖಲೆಪತ್ರಗಳನ್ನು ಸರಿಪಡಿಸುವ ಕೆಲಸವೂ ಪ್ರಗತಿಯಲ್ಲಿದೆ. ಮುಖ್ಯರಸ್ತೆಯಿಂದ ಭವನಕ್ಕೆ ಸಾಗುವ ರಸ್ತೆಯನ್ನು ಅಭಿವೃದ್ಧಿಪಡಿಸುವುದು, ಭವನಕ್ಕೆ ಕಟ್ಟಡ ಸಂಖ್ಯೆ ಒದಗಿಸುವುದರ ಜತೆಗೆ ನಿರಾಪೇಕ್ಷಣಾ ಸರ್ಟಿಫಿಕೇಟ್ ಒದಗಿಸುವುದು, ಸಂಬಂಧಪಟ್ಟ ಇಲಾಖೆಗಳ ಮೂಲಕ ನೀರಾವರಿ, ವಿದ್ಯುತ್ ಸಂಪರ್ಕ ಒದಗಿಸುವಂತೆ ಪ್ರಾಧಿಕಾರ ಈಗಾಗಲೇ ಕಾಸರಗೋಡು ಜಿಲ್ಲಾಧಿಕಾರಿ, ಕಾಸರಗೋಡು, ಮಂಜೇಶ್ವರದ ಶಾಸಕರು ಹಾಗೂ ಕೇರಳದ ಸಚಿವರನ್ನು ಮನವಿ ಮೂಲಕ ಒತ್ತಾಯಿಸಿದೆ.
ಬದಿಯಡ್ಕ ಗ್ರಾಮ ಪಂಚಾಯಿತಿ ವಿಶೇಷ ಆಸಕ್ತಿ ವಹಿಸಿ, ಮುಖ್ಯ ರಸ್ತೆಯಿಂದ ಭವನಕ್ಕಿರುವ ರಸ್ತೆ ನಿರ್ಮಾಣ ಹಾಗೂ ಬೀದಿ ದೀಪ ಅಳವಡಿಸಲು ಈಗಾಗಲೇ ಅನುದಾನ ಒದಗಿಸುವ ಭರವಸೆ ನೀಡಿದ್ದು, ರಸ್ತೆನಿರ್ಮಾಣಕ್ಕಿರುವ ತಾಂತ್ರಿಕ ಅನುಮತಿಗಾಗಿ ಜಿಲ್ಲಾಧಿಕಾರಿಯನ್ನು ಭೇಟಿಮಾಡಿ, ತುರ್ತು ಅನುಮತಿ ಮಂಜೂರುಗೊಳಿಸುವಂತೆ ಒತ್ತಾಯಿಸುವುದಾಗಿ ಗ್ರಾಪಂ ಉಪಾಧ್ಯಕ್ಷ ಎಂ.ಅಬ್ಬಾಸ್ ತಿಳಿಸಿದ್ದಾರೆ.

.jpg)
.jpg)
