ಕಾಸರಗೋಡು: ಪತಿಯಿಂದ ಬೇರ್ಪಟ್ಟು ವಾಸಿಸುತ್ತಿರುವ ಮಹಿಳೆ ಹಾಗೂ ಅವರ ಮೊಮ್ಮಗಳು ನಿದ್ರಿಸುತ್ತಿದ್ದ ಕೊಠಡಿಗೆ ಪೆಟ್ರೋಲ್ ಸುರಿದು ಅವರ ಕೊಲೆಗೆ ಯತ್ನಿಸಿದ ವ್ಯಕ್ತಿ, ಸ್ವತ: ಬೆಂಕಿ ತಗುಲಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾನೆ. ಪಾಣತ್ತೂರು ನೆಲ್ಲಿಕುನ್ನು ನಿವಾಸಿ ಜೋಸೆಫ್(65)ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ವ್ಯಕ್ತಿ. ಜೋಸೆಫ್‍ನ ಪತ್ನಿ ಸಿಸಿಲಿ ಹಲವು ವರ್ಷಗಳಿಂದ ಪುತ್ರ, ಸೊಸೆ ಹಾಗೂ ಮೊಮ್ಮಗಳ ಜತೆ ಬೇರೆಯಾಗಿ ವಾಸಿಸುತ್ತಿದ್ದು, ಗುರುವಾರ ರಾತ್ರಿ ಜೋಸೆಫ್, ಆರರ ಹರೆಯದ ಮೊಮ್ಮಗಳೊಂದಿಗೆ ಮಲಗಿ ನಿದ್ರಿಸುತ್ತಿದ್ದ ಸಿಸಿಲಿ ಅವರ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಮನೆಯೊಳಗಿದ್ದವರು, ಎಚ್ಚರಗೊಂಡು ಹೊರಕ್ಕೆ ಧಾವಿಸಿರುವುದರಿಂದ ಅಪಾಯದಿಂದ ಪಾರಗಿದ್ದಾರೆ. ಬೆಂಕಿಹಚ್ಚುವ ಮಧ್ಯೆ ಜೋಸೆಫ್ ಮೈಗೆ ಬೆಂಕಿ ತಗುಲಿದೆ. ಮನೆಯವರ ಬೊಬ್ಬೆಕೇಳಿ ಆಸುಪಾಸಿನವರು ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿ, ಬೆಂಕಿ ಶಮನಗೊಳಿಸಿದ್ದಾರೆ. ಕೊಠಡಿಯೊಳಗಿನ ಮಂಚ, ಹಾಸಿಗೆ ಹಾಗೂ ಇತರ ಪೀಠೋಪಕರಣ ಉರಿದು ನಾಶಗೊಂಡಿದೆ. ನಂತರ ಗಾಯಾಳು ಜೋಸೆಫ್‍ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಜಾಪುರಂ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

