ಭುವನೇಶ್ವರ: ಒಡಿಶಾದ ಕಂಧಮಾಲ್‌ನಲ್ಲಿ ಭದ್ರತಾ ಪಡೆಗಳ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಕುಖ್ಯಾತ ನಕ್ಸಲ್ ನಾಯಕ ಗಣೇಶ್ ಉಯಿಕೆ ಸೇರಿದಂತೆ 4 ಮಂದಿ ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದಲ್ಲಿ ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ ಕೇಂದ್ರ ಸಮಿತಿ ಸದಸ್ಯರಾದ ಉಯಿಕೆ ಬಗ್ಗೆ ಮಾಹಿತಿ ನೀಡಿದವರಿಗೆ ₹1.1 ಕೋಟಿ ಬಹುಮಾನ ಘೋಷಿಸಲಾಗಿತ್ತು ಎಂದು ನಕ್ಸಲ್ ನಿಗ್ರಹ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಅಧಿಕಾರಿ ತಿಳಿಸಿದ್ದಾರೆ.
ಚಕಪಾಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿದೆ.
'ಗುಂಡಿನ ಕಾಳಗದಲ್ಲಿ ಹತನಾದ ಒಬ್ಬ ನಕ್ಸಲನನ್ನು 69 ವರ್ಷದ ಉಯಿಕೆ ಎಂದು ಗುರುತಿಸಲಾಗಿದೆ. ಆತನನ್ನು ಪಕ್ಕ ಹನುಮಂತು ಎಂದೂ ಕರೆಯಲಾಗುತ್ತದೆ. ಗಣೇಶ್ ಅವರು ತೆಲಂಗಾಣದ ಚೆಂದೈರ್ ಮಂಡಲದ ಪುಲ್ಲೆಮಲ ಹಳ್ಳಿಯ ನಿವಾಸಿಯಾಗಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
ಉಳಿದ ಮೂವರು ನಕ್ಸಲರ ಮೂಲ ಇನ್ನಷ್ಟೇ ತಿಳಿಯಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತಂತೆ ಎಕ್ಸ್ ಪೋಸ್ಟ್‌ನಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, 'ನಕ್ಸಲ್ ಮುಕ್ತ ಭಾರತದತ್ತ ಮಹತ್ವದ ಮೈಲಿಗಲ್ಲು' ಎಂದು ಬಣ್ಣಿಸಿದ್ದಾರೆ.
ಈ ಕಾರ್ಯಾಚರಣೆಯ ಮೂಲಕ ಒಡಿಶಾ ಸಂಪೂರ್ಣ ನಕ್ಸಲ್ ಮುಕ್ತ ರಾಜ್ಯವಾಗುವತ್ತ ಸಾಗಿದೆ. ಮಾರ್ಚ್ 31ರ ಹೊತ್ತಿಗೆ ಇದನ್ನು ಸಾಧಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

