HEALTH TIPS

ಡಿಜಿಟಲ್‌ ಅರೆಸ್ಟ್: ಡಿ.ವೈ.ಚಂದ್ರಚೂಡ್‌ ಸೋಗಿನಲ್ಲಿ ಮಹಿಳೆಗೆ ₹3.71 ಕೋಟಿ ವಂಚನೆ

ಮುಂಬೈ: ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ಸೋಗಿನಲ್ಲಿ ವಂಚಕರು ಮಹಿಳೆಯೊಬ್ಬರನ್ನು (68) ಡಿಜಿಟಲ್ ಅರೆಸ್ಟ್‌ ಮಾಡಿ, ಅವರಿಂದ ₹3.71 ಕೋಟಿ ದೋಚಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಗುಜರಾತ್‌ನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಪಶ್ಚಿಮ ಅಂಧೇರಿ ನಿವಾಸಿಯಾಗಿರುವ ಮಹಿಳೆಗೆ ಆಗಸ್ಟ್‌ 18ರಂದು ದಕ್ಷಿಣ ಮುಂಬೈನ ಕೊಲಾಬಾ ಠಾಣೆಯ ಸಿಬ್ಬಂದಿ ಹೆಸರಿನಲ್ಲಿ ವಂಚಕರು ಕರೆ ಮಾಡಿದ್ದಾರೆ. ಮಹಿಳೆಯ ಬ್ಯಾಂಕ್‌ ಖಾತೆಯನ್ನು ಅಕ್ರಮ ಹಣ ವರ್ಗಾವಣೆಗಾಗಿ ಬಳಸಿಕೊಳ್ಳಲಾಗಿದೆ ಎಂದು ತಿಳಿಸಿ, ಆಕೆಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿರುವುದಾಗಿ ನಂಬಿಸಿದ್ದಾರೆ.

ವಂಚಕ ತನ್ನನ್ನು ತಾನು ಅಧಿಕಾರಿ ಎಸ್‌.ಕೆ.ಜೈಸ್ವಾಲ್‌ ಎಂದು ಪರಿಚಯಿಸಿಕೊಂಡು, ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿದೆ ಎಂದು ನಂಬಿಸಿದ್ದಾನೆ. ಮಹಿಳೆಗೆ ತಮ್ಮ ಜೀವನದ ಕುರಿತು 2-3 ಪುಟಗಳ ಪ್ರಬಂಧ ಬರೆಯಬೇಕೆಂದು ಸೂಚಿಸಿ, ನಂತರ 'ನೀವು ಅಮಾಯಕರು ಎನ್ನುವ ಬಗ್ಗೆ ನನಗೆ ನಂಬಿಕೆ ಬಂದಿದೆ. ನಿಮಗೆ ಜಾಮೀನು ಸಿಗುವಂತೆ ಮಾಡುತ್ತೇನೆ' ಎಂದು ಭರವಸೆ ನೀಡಿದ್ದಾನೆ.

ವಿಡಿಯೊ ಕಾಲ್‌ನಲ್ಲಿ ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿ, ವಂಚಕರು ನಕಲಿ ಕೋರ್ಟ್‌ ಕೂಡ ಸೃಷ್ಟಿಸಿದ್ದಾರೆ. ಅಲ್ಲಿ ವ್ಯಕ್ತಿಯೊಬ್ಬ ತನ್ನನ್ನು ತಾನು ಚಂದ್ರಚೂಡ್‌ ಎಂದು ಪರಿಚಯಿಸಿಕೊಂಡು, ದಾಖಲಾತಿ ಪರಿಶೀಲನೆ ಹೆಸರಿನಲ್ಲಿ ಬ್ಯಾಂಕ್‌ ಮಾಹಿತಿ ಪಡೆದಿದ್ದಾನೆ.

ಆಗಸ್ಟ್‌ 18 ರಿಂದ ಅಕ್ಟೋಬರ್‌ 13ರ ವರೆಗೆ ಮಹಿಳೆಯನ್ನು ಡಿಜಿಟಲ್‌ ಅರೆಸ್ಟ್‌ನಲ್ಲಿ ಇರಿಸಿ, ಆಕೆಯ ಬ್ಯಾಂಕ್‌ ಖಾತೆಯಿಂದ ವಿವಿಧ ನಕಲಿ ಖಾತೆಗಳಿಗೆ ಬರೋಬ್ಬರಿ ₹3.71 ಕೋಟಿಯನ್ನು ವಂಚಕರು ವರ್ಗಾಯಿಸಿಕೊಂಡಿದ್ದಾರೆ.

ಬಳಿಕ, ವಂಚಕರು ಕರೆ ಸ್ವೀಕರಿಸುವುದನ್ನು ಸ್ಥಗಿತಗೊಳಿಸಿದ್ದಾರೆ. ಆಗ ಮಹಿಳೆಗೆ ವಂಚನೆಗೆ ಒಳಗಾಗಿರುವುದು ತಿಳಿದ ಬಳಿಕ ಸೈಬರ್‌ ಠಾಣೆಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳ ಜಾಡು ಪತ್ತೆ:

ಮಹಿಳೆಯ ಖಾತೆಯಿಂದ ಹಲವಾರು ನಕಲಿ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಈ ಪೈಕಿ ಒಂದು ಖಾತೆಯು ಗುಜರಾತ್‌ನ ಸೂರತ್‌ ಮೂಲಕ ವ್ಯಕ್ತಿಯದ್ದು ಎಂಬುದನ್ನು ಪೊಲೀಸರು ಪತ್ತೆಹಚ್ಚಿ, ಆತನನ್ನು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯು ಬಟ್ಟೆ ಮಾರಾಟದ ಹೆಸರಿನಲ್ಲಿ ನಕಲಿ ಕಂಪನಿಯನ್ನು ತೆರೆದು ಅದರ ವಹಿವಾಟಿಗಾಗಿ ಚಾಲ್ತಿ ಖಾತೆಯನ್ನು ತೆರೆದಿದ್ದಾನೆ. ಈ ಖಾತೆಯನ್ನು ಸೈಬರ್‌ ವಂಚಕರು ಬಳಸಲು ನೀಡಿದ್ದಾನೆ. ವಂಚಕರು ಇದೇ ಖಾತೆಗೆ ಮೊದಲು ₹1.71 ಕೋಟಿ ವರ್ಗಾಯಿಸಿಕೊಂಡಿದ್ದಾರೆ ಇದಕ್ಕಾಗಿ ಆತನಿಗೆ ₹6.40 ಲಕ್ಷ ನೀಡಿದ್ದಾರೆ. ಈ ಪಿತೂರಿಯ ಹಿಂದಿನ ಇಬ್ಬರು ರೂವಾರಿಗಳ ಮಾಹಿತಿಯನ್ನು ಬಂಧಿತ ವ್ಯಕ್ತಿ ಬಹಿರಂಗ ಪಡಿಸಿದ್ದಾನೆ. ಈ ಇಬ್ಬರೂ ಸದ್ಯಕ್ಕೆ ವಿದೇಶದಲ್ಲಿದ್ದು, ಒಬ್ಬ ವ್ಯಕ್ತಿ ವಲಸೆ ಮತ್ತು ವೀಸಾ ಸೇವಾ ಸಂಸ್ಥೆಯನ್ನು ಹೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries