ವಾಷಿಂಗ್ಟನ್: ಈಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಮತ್ತು ನಾಗರಿಕರೊಬ್ಬರು ಮೃತಪಟ್ಟಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿಜ್ಞೆ ಮಾಡಿದ್ದರು. ಅದರಂತೆಯೇ ಅಮೆರಿಕದ ಸೇನಾಪಡೆಗಳು ಸಿರಿಯಾದಲ್ಲಿರುವ 'ಇಸ್ಲಾಮಿಕ್ ಸ್ಟೇಟ್' ಭಯೋತ್ಪಾದಕ ಸಂಘಟನೆಯ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿವೆ.
ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದ್ದ ಗೋದಾಮುಗಳು, ಕಟ್ಟಡಗಳು ಸೇರಿದಂತೆ ಮಧ್ಯ ಸಿರಿಯಾದಾದ್ಯಂತ 70ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಶಂಕಿತ ಇಸ್ಲಾಮಿಕ್ ಸ್ಟೇಟ್ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು ಫಿರಂಗಿಗಳು 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉಡಾಯಿಸಲಾಗಿದೆ ಎಂದು ಅಮೆರಿಕ ಸೇನಾಧಿಕಾರಿಗಳು ತಿಳಿಸಿದ್ದಾರೆ.
ಸಿರಿಯಾದಲ್ಲಿ ಅಮೆರಿಕ ಸೇನಾಪಡೆಗಳು ದಾಳಿ ನಡೆಸಿರುವ ಫೋಟೊ ಮತ್ತು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
'ಇದು ಯುದ್ಧದ ಆರಂಭವಲ್ಲ, ಇದು ಪ್ರತೀಕಾರದ ಘೋಷಣೆಯಾಗಿದೆ. ಟ್ರಂಪ್ ಅವರ ನಾಯಕತ್ವದಲ್ಲಿ ಅಮೆರಿಕವು ತನ್ನ ಜನರನ್ನು ರಕ್ಷಿಸಲು ಎಂದಿಗೂ ಹಿಂಜರಿಯುವುದಿಲ್ಲ' ಎಂದು ಅಮೆರಿಕ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ತಿಳಿಸಿದ್ದಾರೆ.
'ಇಂದು, ನಾವು ನಮ್ಮ ಶತ್ರುಗಳನ್ನು ಬೇಟೆಯಾಡಿದ್ದೇವೆ. ಪ್ರತೀಕಾರದ ದಾಳಿಯನ್ನು ನಾವು ಮುಂದುವರಿಯುತ್ತೇವೆ' ಎಂದಿರುವ ಹೆಗ್ಸೆತ್, ಸಿರಿಯಾ ಮೇಲಿನ ದಾಳಿಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.
'ಐದು ವರ್ಷಗಳ ಹಿಂದೆ ಟ್ರಂಪ್ ಆಡಳಿತವು 'ಇಸ್ಲಾಮಿಕ್ ಸ್ಟೇಟ್' ಭಯೋತ್ಪಾದಕರನ್ನು ಹೊಡೆದುರುಳಿಸಿತ್ತು. ಇದೀಗ ಮತ್ತೆ ಗುಂಪುಗೂಡಲು ಪ್ರಯತ್ನಿಸುತ್ತಿದ್ದ ಸಿರಿಯಾದಲ್ಲಿ ಐಸಿಸ್ ಗೂಂಡಾಗಳನ್ನು ನಾವು ಹೊಡೆದು ಹಾಕಿದ್ದೇವೆ' ಎಂದೂ ಹೆಗ್ಸೆತ್ ವಿವರಿಸಿದ್ದಾರೆ.

