HEALTH TIPS

ಸಹೋದರನ ಪತ್ತೆಗಾಗಿ ಎರಡು ಬಾರಿ ರಷ್ಯಾಗೆ ತೆರಳಿ ಹುಡುಕಾಟ; ಪಂಜಾಬ್ ಯುವಕನ ಸಾಹಸ!

ಜಲಂಧರ್: ಕಾಣೆಯಾಗಿರುವ ಸಹೋದರನ ಪತ್ತೆಗಾಗಿ ಅಪಾಯವನ್ನೂ ಲೆಕ್ಕಿಸದೇ ಎರಡು ಬಾರಿ ರಷ್ಯಾಗೆ ತೆರಳಿ ತಿಂಗಳಗಟ್ಟಲೆ ಹುಡುಕಾಟ ನಡೆಸಿದ ಪಂಜಾಬ್‌ ನ ಯುವಕನೋರ್ವ, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಸೇನೆಗೆ ಸೇರಿದ್ದ ಕನಿಷ್ಠ 10 ಭಾರತೀಯರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಜಲಂಧರ್ ಜಿಲ್ಲೆಯ ಗೊರಯಾ ನಿವಾಸಿ ಜಗದೀಪ್ ಕುಮಾರ್ ಅವರ ಸಹೋದರ ಮಂದೀಪ್ ಕುಮಾರ್, 2024ರ ಮಾರ್ಚ್ ಬಳಿಕ ಸಂಪರ್ಕ ಕಳೆದುಕೊಂಡಿದ್ದಾರೆ. ಕುಟುಂಬದೊಂದಿಗೆ ಯಾವುದೇ ಸಂಪರ್ಕವಿಲ್ಲದ ಹಿನ್ನೆಲೆಯಲ್ಲಿ, ಸಹೋದರ ಜೀವಂತವಾಗಿರಬಹುದೆಂಬ ನಿರೀಕ್ಷೆಯೊಂದಿಗೆ ಜಗದೀಪ್ ಸ್ವತಃ ರಷ್ಯಾಗೆ ತೆರಳಿದರು ಎಂದು ತಿಳಿದು ಬಂದಿದೆ.

ಮೊದಲ ಬಾರಿ 21 ದಿನಗಳು, ನಂತರ ಎರಡನೇ ಬಾರಿ ಸುಮಾರು ಎರಡು ತಿಂಗಳು ರಷ್ಯಾದಲ್ಲಿ ಉಳಿದುಕೊಂಡು ಭಾರತೀಯರ ಬಗ್ಗೆ ಮಾಹಿತಿ ಸಂಗ್ರಹಿಸಲು ಹಾಗೂ ಸಹೋದರನ ಸುಳಿವು ಹುಡುಕಲು ಪ್ರಯತ್ನಿಸಿದರು ಎನ್ನಲಾಗಿದೆ.

ಭಾಷಾ ಅಡಚಣೆ, ಸ್ಥಳೀಯ ಆಡಳಿತ ವ್ಯವಸ್ಥೆಗಳ ಅಸಹಕಾರ ಹಾಗೂ ಮಾಹಿತಿ ಕೊರತೆಯಿಂದ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು ಎಂದು ಜಗದೀಪ್ ತಿಳಿಸಿದ್ದಾರೆ. "ಆದರೂ ಸಹೋದರನ ಬಗ್ಗೆ ಸಣ್ಣ ಸುಳಿವು ಸಿಗಬಹುದೆಂಬ ಆಶಯವೇ ಹುಡುಕಾಟ ಮುಂದುವರಿಸಲು ಶಕ್ತಿ ನೀಡಿತು," ಎಂದು ಅವರು ಹೇಳಿದ್ದಾರೆ.

ಈ ಹುಡುಕಾಟದ ವೇಳೆ, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಪರ ಹೋರಾಡಲು ಸೇನೆಗೆ ಸೇರಿದ್ದ ಕನಿಷ್ಠ 10 ಭಾರತೀಯರು ಸಾವಿಗೀಡಾಗಿರುವ ಮಾಹಿತಿ ಲಭ್ಯವಾಗಿದೆ ಎಂದು ಜಗದೀಪ್ ಹೇಳಿದ್ದಾರೆ. ಮೃತಪಟ್ಟವರಲ್ಲಿ ಮೂವರು ಪಂಜಾಬ್‌ನವರು, ಉಳಿದವರು ಜಮ್ಮು ಹಾಗೂ ಉತ್ತರ ಪ್ರದೇಶದವರು ಎಂದು ಅವರು ತಿಳಿಸಿದ್ದಾರೆ. ಆದರೆ ಈ ಕುರಿತು ಯಾವುದೇ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ.

ಮೃತ ಭಾರತೀಯರಿಗೆ ಸಂಬಂಧಿಸಿದಂತೆ ದೊರೆತ ಕೆಲವು ದಾಖಲೆಗಳನ್ನು ರಾಜ್ಯಸಭಾ ಸದಸ್ಯ ಬಲ್ಬೀರ್ ಸಿಂಗ್ ಸೀಚೆವಾಲ್ ಅವರ ಕಚೇರಿಗೆ ಸಲ್ಲಿಸಿರುವುದಾಗಿ ಜಗದೀಪ್ ಹೇಳಿದ್ದಾರೆ.

ಸಹೋದರನ ರಕ್ಷಣೆಗೆಂದು 2024ರ ಜೂನ್ 29ರಂದು ಸೀಚೆವಾಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾಗಿ ಜಗದೀಪ್ ಹೇಳಿದ್ದಾರೆ. ಇದರ ಬೆನ್ನಲ್ಲೇ, ಸೀಚೆವಾಲ್ ಅವರು ವಿದೇಶಾಂಗ ಸಚಿವ ಅವರನ್ನು ಭೇಟಿಯಾಗಿ, ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲು ಹಾಗೂ ರಷ್ಯಾದಲ್ಲಿ ಮೃತಪಟ್ಟ ಯುವಕರ ಶವಗಳನ್ನು ಭಾರತಕ್ಕೆ ತರಿಸಿ ಕುಟುಂಬಗಳಿಗೆ ಹಸ್ತಾಂತರಿಸುವಂತೆ ಒತ್ತಾಯಿಸಿದ್ದರು. ಜೊತೆಗೆ, ಯುವಕರಿಗೆ ಆಮಿಷ ಒಡ್ಡುವ ಏಜೆಂಟ್‌ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ರಷ್ಯಾ ಸೇನೆಗೆ ಭಾರತೀಯರ ನೇಮಕಾತಿಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಹಾಗೂ ಈಗಾಗಲೇ ಸೇನೆಯಲ್ಲಿ ಇರುವ ಎಲ್ಲ ಭಾರತೀಯರನ್ನು ಬಿಡುಗಡೆ ಮಾಡಬೇಕು ಎಂದು ಭಾರತ ಸರ್ಕಾರ ಸೆಪ್ಟೆಂಬರ್‌ನಲ್ಲಿ ರಷ್ಯಾಗೆ ಮನವಿ ಮಾಡಿತ್ತು. ಆಮಿಷಗಳಿಗೆ ಒಳಗಾಗದೆ ರಷ್ಯಾ ಸೇನೆಗೆ ಸೇರದಂತೆ ಭಾರತೀಯರಿಗೆ ಎಚ್ಚರಿಕೆಯನ್ನೂ ನೀಡಲಾಗಿತ್ತು.

"ಕೆಲವು ಯುವಕರು ತಮ್ಮ ಕುಟುಂಬಗಳನ್ನು ಸೇರಿಕೊಳ್ಳಲು ಸಾಧ್ಯವಾಗಿದೆ. ನನ್ನ ಸಹೋದರನೂ ಸುರಕ್ಷಿತವಾಗಿ ಮರಳಲಿ ಎಂಬ ನಿರೀಕ್ಷೆಯೇ ನನ್ನ ಎಲ್ಲಾ ಪ್ರಯತ್ನಗಳ ಉದ್ದೇಶ," ಎಂದು ಜಗದೀಪ್ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries