ಢಾಕಾ: 'ಈ ದೇಶವು ಮುಸ್ಲಿಮರು, ಹಿಂದೂಗಳು, ಬೌದ್ಧರು ಮತ್ತು ಕ್ರೈಸ್ತರು ಸೇರಿದಂತೆ ಎಲ್ಲ ಧರ್ಮದ ನಾಗರಿಕರಿಗೆ ಸೇರಿದೆ' ಎಂದು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ(ಬಿಎನ್ಪಿ) ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್ ಹೇಳಿದ್ದಾರೆ.
ಗಡೀಪಾರಾಗಿ 17 ವರ್ಷಗಳ ಬಳಿಕ ನಿನ್ನೆ(ಗುರುವಾರ) ತವರಿಗೆ ಮರಳಿದ ಅವರು ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ.
ಈ ವೇಳೆ ಯುವ ನಾಯಕ ಉಸ್ಮಾನ್ ಹಾದಿ ಹತ್ಯೆ ಬಳಿಕ ದೇಶದ ರಾಜಕೀಯ ಅಸ್ಥಿರತೆ ಬಗ್ಗೆ ಮಾತನಾಡಿದ ಅವರು, ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ.
'ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಾಗಿರಲಿ, ಯಾವುದೇ ಧರ್ಮವನ್ನು ನಂಬಲಿ, ಎಲ್ಲರೂ ಪಕ್ಷಾತೀತವಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕೈಜೋಡಿಸಬೇಕು' ಎಂದು ಹೇಳಿದ್ದಾರೆ.
'ಜಾತಿ, ಮತ, ನಂಬಿಕೆಗಳನ್ನು ಲೆಕ್ಕಿಸದೇ, ಎಲ್ಲರಿಗೂ ಸುರಕ್ಷಿತ ಬಾಂಗ್ಲಾದೇಶ ನಿರ್ಮಿಸಲು ಪಣತೊಡುತ್ತೇನೆ. ಮುಸಲ್ಮಾನರು, ಹಿಂದೂ, ಬೌದ್ಧ, ಕ್ರೈಸ್ತರೇ ಇರಲಿ, ಪ್ರತಿ ಮಹಿಳೆ, ಮಕ್ಕಳು ಕೂಡ ಮನೆಯಿಂದ ಸುರಕ್ಷಿತವಾಗಿ ಹೊರಟು, ಸುರಕ್ಷಿತವಾಗಿ ತಲುಪಲು ಕ್ರಮ ಕೈಗೊಳ್ಳಲಾಗುವುದು' ಎಂದು ಭರವಸೆ ನೀಡಿದ್ದಾರೆ.
ಇದೇ ವೇಳೆ ಅಮೆರಿಕದ ಮಾನವ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, 'ನನ್ನ ದೇಶದ ಜನರಿಗಾಗಿ, ನನ್ನ ದೇಶಕ್ಕಾಗಿ ನನ್ನ ಬಳಿ ಒಂದು ಯೋಜನೆ ಇದೆ' ಎಂದಿದ್ದಾರೆ.
'ನನ್ನ ದೇಶದ ಜನರಿಗಾಗಿ, ನನ್ನ ದೇಶಕ್ಕಾಗಿ ನನ್ನ ಬಳಿ ಒಂದು ಯೋಜನೆಯಿದೆ. ಇದು ಜನರಿಗಾಗಿ ರೂಪಿಸಿದ ಯೋಜನೆಯಾಗಿದೆ. ದೇಶದ ಅಭಿವೃದ್ಧಿಗಾಗಿ ರೂಪಿಸಿದ ಯೋಜನೆಯಾಗಿದ್ದು, ಇದನ್ನು ಜಾರಿಗೊಳಿಸಲು ಜನರ ಸಹಕಾರ ಅತ್ಯಗತ್ಯವಾಗಿದೆ. ನೀವು ನನ್ನ ಜೊತೆಗಿದ್ದರೆ, ದೇವರ ಇಚ್ಛೆಯಿದ್ದರೆ, ನಾವೆಲ್ಲರೂ ಸೇರಿಕೊಂಡು ಇದನ್ನು ಜಾರಿಗೆ ತರಬಹುದು' ಎಂದು ತಾರಿಕ್ ಹೇಳಿದ್ದಾರೆ.

