ಕಾಸರಗೋಡು: ರೈಲು ಬಡಿದು ಕೊಡಗು ನಿವಾಸಿಯೊರ್ವ ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ಕಾಸರಗೋಡು ರೈಲು ನಿಲ್ದಾಣದಲ್ಲಿ ನಡೆದಿದೆ.
ಮೃತನನ್ನು ಕರ್ನಾಟಕದ ಕೊಡಗು ನಿವಾಸಿ ರಾಜೇಶ್ (35) ಎಂದು ಗುರುತಿಸಲಾಗಿದೆ.
ರೈಲಿನಿಂದ ಇಳಿದು ಹಳಿ ಮೂಲಕ ಅಡ್ಡದಾಟಿ ಮತ್ತೊಂದು ಫ್ಲಾಟ್ಫಾರ್ಮ್ ಏರಲು ಯತ್ನಿಸುತ್ತಿದ್ದ ವೇಳೆ ಗೂಡ್ಸ್ ರೈಲು ಬಡಿದು ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಅಪಘಾತದ ಪರಿಣಾಮ ರಾಜೇಶ್ ಅವರ ತಲೆ ಸಂಪೂರ್ಣವಾಗಿ ಜಜ್ಜಿ ಹೋಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹ ಧರಿಸಿದ್ದ ಅಂಗಿಯ ಜೇಬಿನಲ್ಲಿ ದೊರೆತ ಆಧಾರ್ ಕಾರ್ಡ್ ಆಧಾರದ ಮೇಲೆ ಅವರ ಗುರುತು ಪತ್ತೆಯಾಗಿದೆ.
ಮೃತದೇಹದ ಅವಶೇಷಗಳನ್ನು ಸಂಗ್ರಹಿಸಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ರೈಲು ದುರಂತದ ಮಾಹಿತಿ ಮೃತರ ಸಂಬಂಧಿಕರಿಗೆ ರೈಲ್ವೇ ಪೊಲೀಸರು ತಿಳಿಸಿದ್ದಾರೆ.
ಮೃತ ರಾಜೇಶ್ ಅವರು ಚೆನ್ನಯ್ಯ ಎಂಬವರ ಪುತ್ರರಾಗಿದ್ದು, ಹಳಿ ಅಡ್ಡದಾಟುವಾಗ ತೋರಿದ ಅಜಾಗರೂಕತೆಯೇ ಅಪಘಾತಕ್ಕೆ ಕಾರಣವಾಗಿದೆ ಎಂದು ರೈಲ್ವೇ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

