HEALTH TIPS

ಅರಾವಳಿ ಪರ್ವತ ಶ್ರೇಣಿಯ ವ್ಯಾಖ್ಯಾನಕ್ಕೆ ಸುಪ್ರೀಂ ತಡೆ, ಪರಿಶೀಲನೆಗೆ ಸಮಿತಿ

ನವದೆಹಲಿ: ಅರಾವಳಿ ಬೆಟ್ಟ ಮತ್ತು ಶ್ರೇಣಿಗಳ ಬಗೆಗಿನ ಮರುವ್ಯಾಖ್ಯಾನ ಕುರಿತು ನವೆಂಬರ್ 20ರ ತೀರ್ಪಿನಲ್ಲಿನ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ ಇಂದು (ಸೋಮವಾರ) ತಡೆ ಹಿಡಿದಿದೆ. 

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೆ.ಕೆ.ಮಾಹೇಶ್ವರಿ ಮತ್ತು ಅಗಸ್ಟೀನ್ ಜಾರ್ಜ್ ಮಸೀಹ್ ಅವರನ್ನೊಳಗೊಂಡ ರಜಾ ಪೀಠವು, ಈ ವಿಷಯದ ಕುರಿತು ಸಮಗ್ರವಾಗಿ ಪರಿಶೀಲಿಸಲು ತಜ್ಞರನ್ನು ಒಳಗೊಂಡ ಉನ್ನತ ಸಮಿತಿಯನ್ನು ರಚಿಸಲು ಪ್ರಸ್ತಾಪಿಸಿತು.

ಅರಾವಳಿ ಬೆಟ್ಟ ಶ್ರೇಣಿಗಳ ಬಗೆಗಿನ ಮರುವ್ಯಾಖ್ಯಾನ ಕುರಿತು ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.

ಈ ವಿಷಯದಲ್ಲಿ ಹೆಚ್ಚಿನ ಸ್ಪಷ್ಟೀಕರಣದ ಅಗತ್ಯವಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಕೇಂದ್ರ ಹಾಗೂ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಿದೆ.

ಅರಾವಳಿ ಬೆಟ್ಟ ಮತ್ತು ಶ್ರೇಣಿಗಳ ಸಂರಕ್ಷಣೆಗಾಗಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸಮಿತಿ ನೀಡಿದ್ದ ಏಕರೂಪದ ವ್ಯಾಖ್ಯಾನವನ್ನು ಸುಪ್ರೀಂ ಕೋರ್ಟ್ ನವೆಂಬರ್ 20ರಂದು ಅನುಮೋದಿಸಿತ್ತು. ತಜ್ಞರು ವರದಿ ಸಲ್ಲಿಸಿದ ನಂತರ ಹರಿಯಾಣ, ರಾಜಸ್ಥಾನ, ಮತ್ತು ಗುಜರಾತ್ ರಾಜ್ಯಗಳಲ್ಲಿ ಹೊಸದಾಗಿ ಗಣಿಗಾರಿಕೆ ಕೈಗೊಳ್ಳಲು ಅನುಮತಿ ನೀಡುವುದನ್ನು ಇದೇ ವೇಳೆ ನಿರ್ಬಂಧಿಸಿತ್ತು.

ರಾಜಸ್ಥಾನ, ಗುಜರಾತ್‌, ಹರಿಯಾಣದಲ್ಲಿರುವ ಅರಾವಳಿ ಜಿಲ್ಲೆಗಳಲ್ಲಿನ ನೂರು ಮೀಟರ್ ಮತ್ತು ಅದಕ್ಕಿಂತ ಎತ್ತರದ ಭೂಪ್ರದೇಶಗಳನ್ನು ಅರಾವಳಿ ಬೆಟ್ಟಗಳು ಮತ್ತು 500 ಮೀಟರ್‌ ಅಂತರದಲ್ಲಿರುವ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಬೆಟ್ಟಗಳನ್ನು ಅರಾವಳಿ ಶ್ರೇಣಿಗಳೆಂದು ಪರಿಗಣಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.

ಈ ಮರುವ್ಯಾಖ್ಯಾನದಿಂದಾಗಿ ಅರಾವಳಿ ವ್ಯಾಪ್ತಿಯ ನೂರು ಮೀಟರ್‌ಗಿಂತ ಕಡಿಮೆ ಎತ್ತರದ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಮಾನವ ಹಸ್ತಕ್ಷೇಪ ನಡೆದು ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಆಕ್ಷೇಪಿಸಿ ರಾಜಸ್ಥಾನ, ಹರಿಯಾಣ ಮತ್ತು ಗುಜರಾತ್‌ನಲ್ಲಿ ವ್ಯಾಪಕ ಪ್ರತಿಭಟನೆಗಳು ಆರಂಭಗೊಂಡಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries