ಪತ್ತನಂತಿಟ್ಟ: ಶಬರಿಮಲೆ ದೇವಸ್ಥಾನ ಮಕರ ಬೆಳಕು ಉತ್ಸವಾಚರಣೆಗಾಗಿ ಇಂದು ಸಂಜೆ ಬಾಗಿಲು ತೆರೆಯಲಾಗಿದೆ. ಮೇಲ್ಶಾಂತಿ ಇಡಿ ಪ್ರಸಾದ್ ನಂಬೂದಿರಿ ಅವರು ತಂತ್ರಿ ಕಂಠಾರರ್ ಮಹೇಶ್ ಮೋಹನರ್ ಅವರ ಸಮ್ಮುಖದಲ್ಲಿ ಸಂಜೆ 5 ಗಂಟೆಗೆ ದೇವಾಲಯದ ಗರ್ಭಗೃಹದ ಬಾಗಿಲು ತೆರೆದು ದೀಪ ಬೆಳಗಿಸಿದರು.
ಮೇಲ್ಶಾಂತಿ ಸನ್ನಿಧಾನದ ಯಜ್ಞಕುಂಡದಲ್ಲಿ ಅಗ್ನಿಸ್ಪರ್ಶ ನಡೆಸಿದ ನಂತರ, ಭಕ್ತರು 18 ನೇ ಮೆಟ್ಟಿಲು ಹತ್ತಿ ದರ್ಶನ ಪಡೆದರು. ದೇವಾಲಯ ತೆರೆದಾಗ, ಭಕ್ತರು ಯೋಗ ಕೋಲು ಮತ್ತು ರುದ್ರಾಕ್ಷ ಮಾಲೆಯೊಂದಿಗೆ ಭಸ್ಮಧಾರಣೆಯ ಅಯ್ಯಪ್ಪನನ್ನು ವೀಕ್ಷಿಸಿದರು.
ಇಂದು ಯಾವುದೇ ಪೂಜೆಗಳಿರಲಿಲ್ಲ. ರಾತ್ರಿ 11 ಗಂಟೆಗೆ ಹರಿವರಾಸನಂ ಹಾಡುವುದರೊಂದಿಗೆ ದೇವಾಲಯವನ್ನು ಮುಚ್ಚಲಾಗುತ್ತದೆ. ಸನ್ನಿಧಾನವನ್ನು ಮೂರು ದಿನಗಳಲ್ಲಿ ಸ್ವಚ್ಛಗೊಳಿಸಿ ಸಿದ್ದತೆ ಪೂರ್ಣಗೊಳಿಸಲಾಗಿದೆ.
ಮಂಗಳವಾರ, ವರ್ಚುವಲ್ ಕ್ಯೂ ದರ್ಶನವನ್ನು 30,000 ಜನರಿಗೆ ಸೀಮಿತಗೊಳಿಸಲಾಗಿತ್ತು. ತುಪ್ಪಾಭಿಷೇಕ ಮತ್ತು ನಿಯಮಿತ ಪೂಜೆಗಳು ಬುಧವಾರದಿಂದ ಮುಂದುವರಿಯುತ್ತವೆ. ಮಕರ ಬೆಳಕು ಮಹೋತ್ಸವ ಜನವರಿ 14 ರಂದು ನಡೆಯಲಿದೆ.


