ಕಾಸರಗೋಡು: ಉತ್ತರ ಕೇರಳ ಹಾಗೂ ದ. ಕರ್ನಾಟಕದಾದ್ಯಂತ ನ್ಯಾಯ ದೇಗುಲವಾಗಿ ಖ್ಯಾತಿ ಪಡೆದಿರುವ ಕಾನತ್ತುರು ಶ್ರೀನಾಲ್ವರ್‍ದೈವಗಳದೈವಸ್ಥಾನದಲ್ಲಿ ಕಳಿಯಾಟ ಮಹೋತ್ಸವ ಡಿ. 27ರಿಂದ ಜನವರಿ 2ರ ವರೆಗೆ ಜರುಗಲಿರುವುದಾಗಿ ದೈವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಪಿ ಬಲರಾಮನ್ ನಾಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾರಣಿಕದ ಪ್ರತೀಕವಾಗಿರುವ ನಾಲ್ವರ್ ದೈವಗಳು ಮತ್ತು ತುಳುನಾಡಿನ ರಾಜದೈವಗಳ ಸಂಗಮದೊಂದಿಗೆ ಕಳಿಯಾಟ ಮಹೋತ್ಸವ ನಡೆದುಬರುತ್ತಿದೆ. ಡಿ. 27ರಂದು ಬೆಳಗ್ಗೆ ದೇಗುಲ ತಂತ್ರಿವರ್ಯರ ನೇತೃತ್ವದಲ್ಲಿ ಶುದ್ಧಿಕಲಶ, ಪ್ರಾರ್ಥನೆ, ಸಂಜೆ ದೈವ ಕೋಲಧಾರಿಗಳಿಗೆ ಕರ್ತವ್ಯ ಹಂಚಿಕೆ ಕಾರ್ಯಕ್ರಮ ನಡೆಯುವುದು. 28ರಂದು ಬೆಳಗ್ಗೆ ಕಳರಿ ಅರಮನೆಯಲ್ಲಿ ಆನೆಚಪ್ಪರ ಏರಿಸುವಿಕೆ, ಮೂಲಸ್ಥಾನ ಬನದಿಂದ ಉತ್ಸವ ನಡೆಯುವ ಅರಮನೆಗೆ ಭಂಡಾರದ ಆಗಮನ, ರಾತ್ರಿ ಎಳೆಯೋರ್ ದೈವದ ಕಳರಿಪಡಿಪ್ಪುರೆಗೆ ಆಗಮಿಸಿ, ನಿರ್ಗಮಿಸುವುದು. 29ರಂದು ಬೆಳಗ್ಗೆ ಚಾಮುಂಡಿ ದೈವ, ಪಂಜುರ್ಲಿ(ಉಗ್ರಮೂರ್ತಿ)ದೈವ, ರಾತ್ರಿ ಮೂತೋರ್ ದೈವ, ಶ್ರೀದೈವದ ಕಳರಿಪಡಿಪ್ಪುರೆಗೆ ಭೇಟಿ, ಜೀತ ಕಾಣಿಕೆ ಸಮರ್ಪಣೆ, ಸುಡುಮದ್ದು ಪ್ರದರ್ಶನ, ಬಂಬೇರಿಯ, ಮಾಣಿಚ್ಚಿ ದೈವಗಳ ನರ್ತನ ಸೇವೆ ನಡೆಯುವುದು.
30ರಂದು ಬೆಳಗ್ಗೆ ಚಾಮುಂಡಿ ದೈವ, ಕಂಡಕಲೆಯ ದೈವಗಳ ಸಂಚಾರ, ಪಂಜುರ್ಲಿ ದೈವ, ರಾತ್ರಿ ಪಾಷಾಣಮೂರ್ತಿ ದೈವ ಕೋಲ ನಡೆಯುವುದು. ಡಿ. 31 ಹಾಗೂ ಜನವರಿ 1ರಂದು ಬೆಳಗ್ಗೆ ಶ್ರೀ ರಕ್ತೇಶ್ವರೀ ದೈವ ಕೋಲ, ತುಲಾಭಾರ ಸೇವೆ, ಮಧ್ಯಾಹ್ನ ಶ್ರೀ ವಿಷ್ಣುಮೂರ್ತಿ ದೈವ, ಪ್ರೇತ ವಿಮೋಚನೆ ನಡೆಯುವುದು. ಜ.2ರಂದು ಬೆಳಗ್ಗೆ ಕಳಗ ಒಪ್ಪಿಸುವುದರೊಂದಿಗೆ ಶ್ರೀ ದೈವಗಳ ಭಂಡಾರದ ನಿರ್ಗಮನವಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ದೈವಸ್ಥಾನ ಸಮಿತಿಯ ವಿ.ವಿ ಪ್ರಭಾಕರನ್, ಕೆ.ಪಿ ಬಾಲಚಂದ್ರನ್ ನಾಯರ್, ಕೆ.ಪಿ ಸೋಮಚಂದ್ರನ್ ನಾಯರ್, ಕೆ,ಪಿ ಜಯಕೃಷ್ಣನ್ ನಾಯರ್, ಪಿ. ವೇಣುಗೋಪಾಲನ್, ಗಿರೀಶ್ ಇ ಉಪಸ್ಥಿತರಿದ್ದರು.


