ಕಾಸರಗೋಡು: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಸಂದರ್ಭದಲ್ಲಿ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಶಾಸಕರಾದ ನ್. ಎ. ನೆಲ್ಲಿಕುನ್ನು, ಎ.ಕೆ.ಎಂ. ಅಶ್ರಫ್ ಸೇರಿದಂತೆ ಮುಸ್ಲಿಂ ಲೀಗ್ ನಾಯಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಬಿಜೆಪಿ ಕೋಯಿಕ್ಕೋಡ್ ವಲಯ ಸಮಿತಿ ಅಧ್ಯಕ್ಷ ವಕೀಲ ಕೆ. ಶ್ರೀಕಾಂತ್, ಆಗ್ರಹಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಶಾಸಕರಿಗಿಲ್ಲ. ಜಿಲ್ಲಾ ಪಂಚಾಐಇತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆನಡೆಯುವ ಸಭೆಗೆ ವಿಳಂಬವಾಗಿ ಆಗಮಿಸಿದ ಸದಸ್ಯರೊಬ್ಬರಿಗೆ ಮತದಾನಕ್ಕೆ ಅವಕಾಶ ನೀಡದಿರುವ ಆಡಳಿತಾಧಿಕಾರಿಯ ನಿರ್ಧಾರವನ್ನು ಸಭೆಯಲ್ಲಿ ಟೀಕಿಸಿರುವುದು ಖಂಡನೀಯ. ಅಲ್ಲದೆ ಜಿಲ್ಲಾಧಿಕಾರಿಯನ್ನು ಡಯಾಸ್ ಬಳಿಗೆ ಬರುವಂತೆ ಒತ್ತಾಯಿಸಿರುವುದು ಆಕ್ಷೇಪಾರ್ಹವಾಗಿದ್ದು, ಶಾಸಕರ ಕ್ರಮ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಜಿಲ್ಲಾ ಪಂಚಾಯತ್ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾರಿಗೂ ಆ ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು, ಚುನಾವಣಾಧಿಕಾರಿ ಜತೆ ಚರ್ಚಿಸಲು ಅವಕಾಶವಿರುವುದಿಲ್ಲ.
ಶಾಸಕರು ಸೇರಿದಂತೆ ಮುಸ್ಲಿಂ ಲೀಗ್ ನಾಯಕರ ಕ್ರಮ ಸ್ಥಳೀಯಾಡಳಿತ ಸಂಸ್ಥೆ ವ್ಯವಸ್ಥೆಗೆ ವಿರುದ್ಧವಾಗಿದೆ. ಇದು ಸ್ಥಳೀಯಾಡಳಿತ ಸಂಸ್ಥೆಗಳ ಸ್ವಾತಂತ್ರ್ಯದ ಮೇಲಿನ ಅತಿಕ್ರಮಣ ಹಾಗೂ ಸಂವಿಧಾನಬಾಹಿರವೂ ಆಗಿದೆ. ಈ ಬಗ್ಗೆ ಪ್ರಬುದ್ಧತೆ ಮೆರೆಯಲು ಶಾಸಕರು ಮುಂದಾಗಬೇಕಿತ್ತು ಎಂದು ಶ್ರೀಕಾಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

