ಕಾಸರಗೋಡು: ನಗರದ ಖ್ಯಾತ ದಂತ ವೈದ್ಯ, ಕನ್ನಡ ಹೋರಾಟಗಾರ ಡಾ. ಕುಳಮರ್ವ ಗಣಪತಿ ಭಟ್ ಅವರನ್ನು ಕಸಾಪ ಕೇರಳ ಗಡಿನಾಡ ಘಟಕ ವತಿಯಿಂದ ಕಾಸರಗೋಡಿನಲ್ಲಿರುವ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು.
ಕನ್ನಡ ಭಾಷೆ, ಸಾಹಿತ್ಯ,ಸಂಸ್ಕøತಿ ಗಳಿಗೆ ಮತ್ತು ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿದ ಹಿರಿಯ ಸಾಧಕರನ್ನು ಅವರ ನಿವಾಸದಲ್ಲಿ ಸನ್ಮಾನಿಸುವ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ' ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ' ಎಂಬ ಕಾರ್ಯಕ್ರಮದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರು ಅಧ್ಯಕ್ಷತೆ ವಹಿಸಿ, ಡಾ .ಕೆ. ಗಣಪತಿ ಭಟ್, ದೇವಕಿ ಭಟ್ ದಂಪತಿಯರನ್ನು ಶಾಲು ಹೊದೆಸಿ ,ಸ್ಮರಣಿಕೆ
ನೀಡಿ ಗೌರವಿಸಿದರು. ಕೇರಳ ಗ್ರಾಮೀಣ ಬ್ಯಾಂಕಿನ ನಿವೃತ್ತ ಪ್ರಬಂಧಕ ವೈ.ಕೆ. ಗೋವಿಂದ ಭಟ್ ಅಭಿನಂದನಾ ಭಾಷಣ ಮಾಡಿದರು. ದಂತವೈದ್ಯರಾಗಿ, ಕನ್ನಡ ಪ್ರೇಮಿಯಾಗಿ ಬರಹಗಾರರಾಗಿ ಡಾ ಕೆ ಗಣಪತಿ ಭಟ್ ಅವರು ಸಲ್ಲಿಸಿದ ಸೇವೆ ಮಹತ್ತರವಾದುದು. 'ಬಿಚ್ಚಿಟ್ಟ ನನ್ನ ಬದುಕು' ಕೃತಿಯ ಮೂಲಕ ತಾನು ಓರ್ವ ಉತ್ತಮ ಬರಹಗಾರ ಎನ್ನುವುದನ್ನು ಅವರು ಸಾಬೀತುಪಡಿಸಿದ್ದಾರೆ. 'ಕಾಸರಗೋಡಿಗೆ ಬಂತು ಕೋಡು' ಸೇರಿದಂತೆ ವಿವಿಧ ಕವನಗಳ ಮೂಲಕ,ಪತ್ರಿಕಾ ಲೇಖನಗಳ ಮೂಲಕ ಅವರು ತಮ್ಮ ಕನ್ನಡ ಪ್ರೇಮವನ್ನು,ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಗೋವಿಂದ ಭಟ್ ತಿಳಿಸಿದರು.
ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್, ಕನ್ನಡ ನೌಕರರ ಸಂಘದ ಮಾಜಿ ಅಧ್ಯಕ್ಷ ಜಯನಾರಾಯಣ ತಾಯನ್ನೂರು, ಕೇರಳ ಲೋಕಸೇವಾ ಆಯೋಗದ ನಿವೃತ್ತ ಅಧೀನ ಕಾರ್ಯದರ್ಶಿ ಗಣೇಶ್ ಪ್ರಸಾದ್ ಪಾಣೂರು, ಡಾ.ವೆಂಕಟಗಿರಿ, ಕಾಸರಗೋಡು ಶ್ರೀ ರಾಮನಾಥ ಸಾಂಸ್ಕೃತಿಕ ಭವನದ ಸಂಚಾಲಕ ಗುರುಪ್ರಸಾದ್ ಕೋಟೆಕಣಿ, ದೇವದಾಸ ಕಾಸರಗೋಡು, ರಮೇಶ ಏತಡ್ಕ, ಸುಜಾತ, ಪ್ರೇಮಶರಧಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು.


