HEALTH TIPS

ಬೇರೆಯವರ ಪ್ರಾಣ ಉಳಿಸಲು ಜೀವ ಕೊಟ್ಟ ಇಬ್ಬರಿಗೆ ಮರಣೋತ್ತರ 'ಬಾಲ ಪುರಸ್ಕಾರ'

ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ತೋರಿದ 20 ಮಕ್ಕಳಿಗೆ ಇಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿಎಂಆರ್‌ಬಿಪಿ) ನೀಡಿ ಗೌರವಿಸಲಾಗಿದೆ.

ಶೌರ್ಯ, ಸಮಾಜ ಸೇವೆ, ಪರಿಸರ, ಕ್ರೀಡೆ, ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆ ಮಾಡುವ 5ರಿಂದ 18 ವರ್ಷದೊಳಗಿನ ಮಕ್ಕಳಿಗೆ ಪ್ರತಿವರ್ಷ 'ವೀರ ಬಾಲ ದಿವಸ'ದಂದು (ಡಿ.26) ಈ ಪುರಸ್ಕಾರ ನೀಡಲಾಗುತ್ತದೆ.

ಕ್ರೀಡಾ ಕ್ಷೇತ್ರದಲ್ಲಿ ಭರವಸೆ ಮೂಡಿಸಿರುವ 9 ಮಂದಿ, ಶೌರ್ಯ ಸಾಧನೆ ತೋರಿದ ನಾಲ್ವರು, ಕಲೆ - ಸಂಸ್ಕೃತಿ, ವಿಜ್ಞಾನ - ತಂತ್ರಜ್ಞಾನ ಹಾಗೂ ಸಮಾಜ ಸೇವೆ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ತಲಾ ಇಬ್ಬರು, ಪರಿಸರಕ್ಕೆ ಕೊಡುಗೆ ನೀಡಿದ ಒಬ್ಬರಿಗೆ ಈ ವರ್ಷ ಪುರಸ್ಕಾರ ನೀಡಲಾಗಿದೆ. ಈ ಪೈಕಿ ಇಬ್ಬರಿಗೆ ಮರಣೋತ್ತರವಾಗಿ ಈ ಗೌರವ ಸಮರ್ಪಿಸಲಾಗಿದೆ.

ಪುರಸ್ಕಾರವು ಪದಕ, ಪ್ರಮಾಣಪತ್ರ ಹಾಗೂ ₹ 1 ಲಕ್ಷ ನಗದನ್ನು ಒಳಗೊಂಡಿದೆ.

ಮರಣೋತ್ತರ ಪುರಸ್ಕಾರ
ತಮಿಳುನಾಡಿನ ವ್ಯೋಮಾ ಪ್ರಿಯಾ ಹಾಗೂ ಬಿಹಾರದ ಕಮಲೇಶ್‌ ಕುಮಾರ್‌ ಅವರಿಗೆ ಮರಣೋತ್ತರವಾಗಿ ಈ ಪುರಸ್ಕಾರ ನೀಡಲಾಗಿದೆ.

ಕೊಯಮತ್ತೂರಿನವರಾದ ವ್ಯೋಮಾ, ವಿದ್ಯುತ್‌ ಪ್ರವಹಿಸಿ ಪ್ರಾಣಾಪಾಯದಲ್ಲಿದ್ದ ಆರು ವರ್ಷದ ಮಗುವನ್ನು ಕಾಪಾಡಲು ಯತ್ನಿಸಿದ್ದ ವೇಳೆ ಮೃತಪಟ್ಟಿದ್ದರು. ಆಗ ಅವರ ವಯಸ್ಸು ಕೇವಲ 9 ವರ್ಷ.

ಕಮಲೇಶ್‌ ಅವರು ಬಿಹಾರದ ಕೈಮೂರ್ ಜಿಲ್ಲೆಯ ಜೈತ್‌ಪುರ್ ಭದ್ವಾಲಿಯಾ ಗ್ರಾಮದವರು. ದುರ್ಗಾವತಿ ನದಿಯಲ್ಲಿ ಮುಳುಗುತ್ತಿದ್ದ ಮಗುವನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದರು. ಆಗ ಅವರಿಗೆ 11 ವರ್ಷ ವಯಸ್ಸಾಗಿತ್ತು.

ಮೃತರ ಪರವಾಗಿ ಅವರ ಕುಟುಂಬದವರು ಪುರಸ್ಕಾರ ಸ್ವೀಕರಿಸಿದ್ದಾರೆ.

ವಿದ್ಯುತ್‌ ಆಘಾತಕ್ಕೆ ಒಳಗಾಗಿದ್ದ ತನ್ನಿಬ್ಬರು ಸ್ನೇಹಿತರನ್ನು ಕಾಪಾಡಿದ್ದ ಕೇರಳದ ಪಾಲಕ್ಕಾಡ್‌ ಬಾಲಕ ಮುಹಮ್ಮದ್‌ ಸಿದಾನ್‌ (11) ಹಾಗೂ ನದಿಯಲ್ಲಿ ಮೊಸಳೆ ದಾಳಿಗೊಳಗಾಗಿದ್ದ ತಮ್ಮ ತಂದೆಯನ್ನು ಕಾಪಾಡಿದ್ದ ಉತ್ತರ ಪ್ರದೇಶದ ಆಗ್ರಾದ ಬಾಲಕ ಅಜಯ್‌ ರಾಜ್‌ (9) ಎಂಬವರಿಗೂ 'ಶೌರ್ಯ' ವಿಭಾಗದಲ್ಲಿ ಪುರಸ್ಕಾರ ನೀಡಲಾಗಿದೆ.

ಯೋಧರಿಗೆ ನೆರವಾಗಿದ್ದ ಬಾಲಕ
ಆಪರೇಷನ್‌ ಸಿಂಧೂರ ಸಂದರ್ಭದಲ್ಲಿ ಭಾರತೀಯ ಯೋಧರಿಗೆ ನೆರವಾಗಿದ್ದ ಪಂಜಾಬ್‌ನ ಫೀರೋಜಪುರ ಬಾಲಕ ಶ್ರವಣ್ ಸಿಂಗ್‌ (10) ಅವರಿಗೂ ಬಾಲ ಪುರಸ್ಕಾರ ನೀಡಲಾಗಿದೆ.

ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ದಾಳಿ ಮಾಡಿದ್ದರು. ಇದೇ ವರ್ಷ ಏಪ್ರಿಲ್‌ 22 ನಡೆದ ಈ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು.

ಬಳಿಕ ಭಾರತೀಯ ಪಡೆಗಳು, ಪಾಕ್‌ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್‌ ಸಿಂಧೂರ' ನಡೆಸಿದ್ದವು. ಪಾಕ್‌ ಸೇನೆ ಪ್ರತಿದಾಳಿ ನಡೆಸಿತ್ತು. ಆ ಸಂದರ್ಭದಲ್ಲಿ ಯೋಧರಿಗೆ, ತಮ್ಮ ಮನೆಯಿಂದ ನಿರಂತರವಾಗಿ ನೀರು, ಹಾಲು, ಆಹಾರ ಒದಗಿಸುವ ಮೂಲಕ ಶ್ರವಣ್ ಅವರು ಯೋಧರಿಗೆ ನೆರವಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries