ಭಾರತದಲ್ಲಿ ವಾಯುಮಾಲಿನ್ಯದಿಂದಾಗಿ ಉಗಮವಾಗುವ ರೋಗಗಳನ್ನು ಬಹುತೇಕವಾಗಿ ವೈದ್ಯಕೀಯ ತಪಾಸಣೆಗೊಳ ಪಡಿಸಲಾಗುತ್ತಿಲ್ಲ ಮತ್ತು ಅವುಗಳಿಗೆ ಚಿಕಿತ್ಸೆಯೂ ದೊರೆಯುತ್ತಿಲ್ಲವೆಂದು ಲಿವರ್‌ಪೂಲ್ ನಗರದ ಶ್ವಾಸಕೋಶ ತಜ್ಞ ಹಾಗೂ ಭಾರತದ ಕೋವಿಡ್ 19 ಸಲಹಾ ಸಮಿತಿಯ ಮಾಜಿ ಸದಸ್ಯ ಮನೀಶ್ ಗೌತಮ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ವಾಯುಮಾಲಿನ್ಯದಿಂದ ಉದ್ಭವಿಸುವ ರೋಗಗಳಿಂದಾಗಿ ಭಾರತೀಯ ಪ್ರಜೆಗಳು ಹಾಗೂ ಅದರ ಆರೋಗ್ಯಪಾಲನಾ ವ್ಯವಸ್ಥೆಯು ಭಾರೀ ಬೆಲೆಯನ್ನು ತೆರಬೇಕಾಗಿ ಬಂದಿದೆಯೆಂದು ಬ್ರಿಟನ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಹಲವಾರು ವೈದ್ಯರುಗಳು ತಿಳಿಸಿದ್ದಾರೆ.
ಭಾರತದ ನಗರಗಳು ಹಾಗೂ ಬ್ರಿಟನ್ ಸೇರಿದಂತೆ ಆಟೋಮೊಬೈಲ್ ವಾಹನಗಳು ಹಾಗೂ ವಿಮಾನ ಸೇರಿದಂತೆ ನಗರ ಸಾರಿಗೆಯಿಂದ ವಾತಾವರಣಕ್ಕೆ ವಿಷಕಾರಿ ಮಾಲಿನ್ಯಗಳ ಹೊರಸೂಸುವಿಕೆ ಹೆಚ್ಚುತ್ತಿರುವುದಕ್ಕೂ ಕಳೆದ ಒಂದು ದಶಕದಲ್ಲಿ ಹೃದ್ರೋಗಗಳ ಸಂಖ್ಯೆಯಲ್ಲಿ ಜಾಗತಿಕ ಮಟ್ಟದಲ್ಲಿ ಏರಿಕೆಯಾಗಿರುವುದಕ್ಕೂ ಪರಸ್ಪರ ನಂಟಿದೆಯೆಂದು ಅವರು ಹೇಳಿದ್ದಾರೆ.
ವಾಯುಗುಣಮಟ್ಟ ಸೂಚ್ಯಂಕಕ್ಕೂ ಹಾಗೂ ಶ್ವಾಸಕೋಶದ ಕಾಯಿಲೆಗಳಿಗೂ ನೇರ ಸಂಬಂಧವಿದೆಯೆಂಬುದನ್ನು ದೃಢಪಡಿಸುವಂತಹ ಯಾವುದೇ ದತ್ತಾಂಶ ಲಭ್ಯವಿಲ್ಲವೆಂದು ಕೇಂದ್ರ ಸರಕಾರವು ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ತಿಳಿಸಿತ್ತು. ಆದಾಗ್ಯೂ ವಾಯುಮಾಲಿನ್ಯವು ಉಸಿರಾಟದ ತೊಂದರೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗುವ ಅಂಶವೆಂಬುದನ್ನು ಅದು ಒಪ್ಪಿಕೊಂಡಿತ್ತು. ವಾಯುಮಾಲಿನ್ಯವು ಉತ್ತರ ಭಾರತದಲ್ಲಿ ವಾಸವಾಗಿರುವ ಕೋಟ್ಯಾಂತರ ಮಂದಿಗೆ ಈಗಾಗಲೇ ಸಾಕಷ್ಟು ಹಾನಿಯೆಸಗಿದೆ. ಪ್ರಸಕ್ತ ವಾಯುಮಾಲಿನ್ಯ ನಿರ್ವಹಣೆಯಲ್ಲಿ ಕೇಂದ್ರ ಸರಕಾರ ಲವಲೇಶದಷ್ಟು ಕ್ರಮಗಳನ್ನು ಮಾತ್ರವೇ ಕೈಗೊಂಡಿದೆ. ಆದರೆ ವಾಯುಜನ್ಯ ರೋಗಗಳು ವ್ಯಾಪಕವಾಗಿ ರೂಪುಗೊಳ್ಳುತ್ತಿವೆ ಎಂದು ಮನೀಶ್ ಗೌತಮ್ ತಿಳಿಸಿದ್ದಾರೆ.
ವರ್ಷಗಳ ಕಾಲ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ, ಶ್ವಾಸಕೋಶದ ಆರೋಗ್ಯ ಹದಗೆಡುವಂತಹ ತುರ್ತುಸ್ಥಿತಿ ಸನ್ನಿವೇಶ ಅನಾವರಣಗೊಳ್ಳುತ್ತಿದೆಯೆಂದು ಅವರು ಎಚ್ಚರಿಕೆ ನೀಡಿದ್ದಾರೆ. ಆದುದರಿಂದ ಕಾನೂನು ನಿರೂಪಕರು ವಾಯುವಿನಿಂದ ಉಗಮವಾಗುವ ರೋಗಗಳನ್ನು ತ್ವರಿತವಾಗಿ ಪತ್ತೆಹಚ್ಚುವ ಹಾಗೂ ಚಿಕಿತ್ಸೆ ನೀಡುವ ಮತ್ತು ಕ್ಷಿಪ್ರವಾಗಿ ಪತ್ತೆಹಚ್ಚುವ 'ಶ್ವಾಸಕೋಶ ಆರೋಗ್ಯ ಕಾರ್ಯಪಡೆ'ಯನ್ನು ರಚಿಸಬೇಕೆಂದು ಮನೀಶ್ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

