ಬೆಳ್ತಂಗಡಿ: ತುಳುವ ಮಹಾಸಭೆಯ ಬೆಳ್ತಂಗಡಿ ತಾಲೂಕು ನೂತನ ಸಂಚಾಲಕರಾಗಿ ಸಾಮಾಜಿಕ, ಧಾರ್ಮಿಕ ಹಾಗೂ ಕೃಷಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬಾಲಕೃಷ್ಣ ವಿ. ಶೆಟ್ಟಿ ಸವಣಾಳು ಅವರನ್ನು ಆಯ್ಕೆ ಮಾಡಲಾಗಿದೆ.
ಬಾಲಕೃಷ್ಣ ವಿ. ಶೆಟ್ಟಿ ಅವರು ಬೆಳ್ತಂಗಡಿ ತಾಲೂಕಿನಲ್ಲಿ ರಾಜಕೀಯ ಸೇವೆ ಸಲ್ಲಿಸಿರುವುದರ ಜೊತೆಗೆ, ಶಿರ್ಲಾಲ್ ತಾಲೂಕ್ ಪಂಚಾಯತ್ ಸದಸ್ಯರಾಗಿಯೂ, ಹಾಗೂ ಮೆಲಂತಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಧಾರ್ಮಿಕ ಚಿಂತಕರಾಗಿರುವ ಅವರು ಸ್ವಾಮಿ ವಿವೇಕಾನಂದರ ಆದರ್ಶಗಳಿಗೆ ಬದ್ಧರಾಗಿದ್ದು, ಬೆಳ್ತಂಗಡಿ ತಾಲೂಕು ವಿವೇಕ ಜಾಗೃತ ಬಳಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಅವರು ವಿವೇಕಾನಂದ ಸೇವಾಶ್ರಮ, ಬೆಳ್ತಂಗಡಿ ಇದರಡಿ ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿ ಜನಮನ್ನಣೆ ಪಡೆದಿದ್ದಾರೆ.
ಪ್ರಗತಿಪರ ಕೃಷಿಕರಾಗಿರುವ ಬಾಲಕೃಷ್ಣ ವಿ. ಶೆಟ್ಟಿ ಅವರು ಅಡಿಕೆ ಕೃಷಿಯಾಗುವ ವ್ಯಾಪಾರ ಕ್ಷೇತ್ರದಲ್ಲಿ ಇದ್ದುಕೊಂಡು ವಿಶಿಷ್ಟ ಸಾಧನೆ ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿಯೇ ಮೊದಲ ಬಾರಿಗೆ ಅಡಿಕೆ ವರ್ತಕರ ಸಂಘವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅವರು ಅಡಿಕೆ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದಾರೆ ಎಂಬುದು ವಿಶೇಷ.
ತುಳು ಭಾಷೆ, ಸಂಸ್ಕøತಿ , ಆಚಾರ ವಿಚಾರಗಳಿಗೆ ಸದಾ ಜಾಗೃತರಾಗಿರುವ ಇವರು ತುಳುನಾಡಿನ ಸವಾರ್ಂಗೀಣ ಅಭಿವೃದ್ಧಿಗೆ ತಮ್ಮ ಅನುಭವ ಮತ್ತು ಸೇವಾಭಾವದಿಂದ ಶಕ್ತಿ ತುಂಬಲಿದ್ದಾರೆ ಎಂಬ ವಿಶ್ವಾಸದೊಂದಿಗೆ, ತುಳುವ ಮಹಾಸಭೆ ಅಂತರಾಷ್ಟ್ರೀಯ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಅಬುದಾಬಿ ಅವರನ್ನು ಬೆಳ್ತಂಗಡಿ ತಾಲೂಕು ಸಂಚಾಲಕರಾಗಿ ನೇಮಕ ಮಾಡಿದ್ದಾರೆ.
ಈ ನೇಮಕದಿಂದ ತುಳುವ ಮಹಾಸಭೆಯ ಚಟುವಟಿಕೆಗಳು ಬೆಳ್ತಂಗಡಿ ತಾಲೂಕಿನಾದ್ಯಂತ ಇನ್ನಷ್ಟು ಬಲ ಪಡೆಯಲಿದ್ದು, ನಾಡು ಕೂಟಗಳ ರಚನೆ, ಸಂಸ್ಕೃತಿಕ ಜಾಗೃತಿ ಹಾಗೂ ಸಾಮಾಜಿಕ ಸಂಘಟನೆಗೆ ಹೊಸ ಚೈತನ್ಯ ಸಿಗಲಿದೆ ಎಂದು ಮಹಾಸಭೆಯ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



