ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾಯಿತ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭ ಭಾನುವಾರ ನೆರವೇರಿತು. ಗ್ರಾಮ ಪಂಚಾಯಿತಿ, ಬ್ಲಾಕ್ ಪಂಚಯಿತಿ, ಜಿಲ್ಲಾ ಪಂಚಾಯಿತಿ, ನಗರಸಭೆ, ಮಹಾನಗರಪಾಲಿಕೆಗೆ ಏಕ ಕಾಲಕ್ಕೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಿ.20ರ ವರೆಗೆ ಸ್ಥಳೀಯಾಡಳಿತ ಸಂಸ್ಥೆಗಳ ಕಾಲಾವಧಿಯಲ್ಲಿದ್ದು, ಡಿ. 21ರಿಂದ ಹೊಸ ಆಡಳಿ ಮಂಡಳಿ ಜಾರಿಗೆ ಬಂದಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ, ಎಲ್ಲಾ ಚುನಾಯಿತ ಸದಸ್ಯರ ಮೊದಲ ಸಭೆಯು ಮೊದಲು ಪ್ರಮಾಣ ವಚನ ಸ್ವೀಕರಿಸಿದ ಸದಸ್ಯರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಗೆ ಸಂಬಂಧಿಸಿದ ಆಯೋಗದ ಪ್ರಕಟಣೆಯನ್ನು ಕಾರ್ಯದರ್ಶಿ ಓದಿ ಹೇಳಿದರು.
ಕಾಸರಗೋಡು ಜಿಲ್ಲಾ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು. ಜಿಲ್ಲಾ ಚುನಾವಣಾ ಅಧಿಕಾರಿ ಕೆ. ಇನ್ಬಾಶೇಖರ್ ಅವರು ಜಿ.ಪಂನ ಅತ್ಯಂತ ಹಿರಿಯ ಚುನಾಯಿತ ಸದಸ್ಯ ರಾಮಪ್ಪ ಮಂಜೇಶ್ವರ ಅವರಿಗೆ ಪ್ರಮಾಣ ವಚನ ಬೋಧಿಸಿದರು. ನಂತರ ರಾಮಪ್ಪ ಮಂಜೇಶ್ವರ ಅವರು ಇತರ ವಿಭಾಗಗಳ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿದರು. ವರ್ಕಾಡಿ ವಿಭಾಗದ ಅಲಿ ಹರ್ಷದ್ ವೊರ್ಕಾಡಿ, ಪುತ್ತಿಗೆ ವಿಭಾಗದ ಜೆ.ಎಸ್. ಸೋಮಶೇಖರ, ದೇಲಂಪಾಡಿಯ ಒ.ವತ್ಸಲಾ, ಕುತ್ತಿಕ್ಕೋಲ್ನ ಸಾಬು ಅಬ್ರಹಾಂ, ಕಳ್ಳಾರ್ ವಿಭಾಗದ ರೀನಾ ಥಾಮಸ್, ಚಿತ್ತಾರಿಕಲ್ ವಿಭಾಗದ ಬಿನ್ಸಿ ಜೈನ್, ಕಯ್ಯೂರು ವಿಭಾಗದ ಕೆ.ಕೃಷ್ಣನ್ ಒಕ್ಲಾವ್, ಪಿಲಿಕೋಡು ವಿಭಾಗದ ಎಂ.ಮನು, ಚೆರುವತ್ತೂರು ವಿಭಾಗದ ಡಾ.ಸೆರೇನಾ ಸಲಾಂ, ಮಡಿಕೈ ವಿಭಾಗದ ಕೆ.ಸಬೀಶ್, ಪೆರಿಯ ವಿಭಾಗದ ಕೆ.ಕೆ.ಸೋಯಾ, ಬೇಕಲ ವಿಭಾಗದ ಟಿ.ವಿ.ರಾಧಿಕಾ, ಉದುಮ ವಿಭಾಗದ ಸುಕುಮಾರಿ ಶ್ರೀಧರನ್, ಚೆಂಗಳ ವಿಭಾಗದ ಜಸ್ನಾ ಮನಾಫ್, ಡಾ.ಶೆಫೀಕ್, ಕುಂಬಳೆ ವಿಭಾಗದ ಅಜೀಜ್ ಕಳತ್ತೂರ್ ಮತ್ತು ಮಂಜೇಶ್ವರಂ ವಿಭಾಗದ ಇರ್ಫಾನಾ ಇಕ್ಬಾಲ್ ಪ್ರಮಾಣ ವಚನ ಸ್ವೀಕರಿಸಿದರು.
ಸಂಸದ ರಾಜಮೋಹನ್ ಉಣ್ಣಿತ್ತಾನ್, ಎನ್.ಎ.ನೆಲ್ಲಿಕುನ್ನು, ವಕೀಲ ಸಿ.ಎಚ್. ಕುಂಜಂಬು, ಎಂ.ರಾಜಗೋಪಾಲನ್, ಎ.ಡಿ.ಎಂ. ಪಿ.ಅಖಿಲ್, ಎಲೆಸ್ಜಿಡಿ ಜಂಟಿ ನಿರ್ದೇಶಕ ಆರ್.ಶೈನಿ, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಎಸ್.ಬಿಜು, ಮಾಜಿ ಜಿಲ್ಲಾಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಾನವಾಸ್ ಪಾದೂರು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಚಿತ್ರ: ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕಾಸರಗೋಡು ಜಿಪಂ ಹಿರಿಯ ಸದಸ್ಯ ರಾಮಪ್ಪ ಮಂಜೇಶ್ವರ ಅವರಿಗೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಪ್ರತಿಜ್ಞೆ ಬೋಧಿಸಿದರು.



