HEALTH TIPS

ನರೇಗಾ ಬುಡಮೇಲು ವಿನಾಶಕ್ಕೆ ದಾರಿ: ಸೋನಿಯಾ ಗಾಂಧಿ

ನವದೆಹಲಿ: ನರೇಗಾವನ್ನು (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ) ಬುಡಮೇಲು ಮಾಡಿರುವುದು ಗ್ರಾಮೀಣ ಭಾರತದ ಕೋಟ್ಯಂತರ ಜನರಿಗೆ ವಿನಾಶದ ಸ್ಥಿತಿಯನ್ನು ತಂದೊಡ್ಡಲಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ಸೋಮವಾರ ಆತಂಕ ವ್ಯಕ್ತಪಡಿಸಿದ್ದಾರೆ.

ಎಲ್ಲರೂ ಒಟ್ಟಾಗಿ, ಸರ್ವರ ಬದುಕಿಗೆ ಭದ್ರತೆ ನೀಡುವ ಹಕ್ಕನ್ನು ರಕ್ಷಿಸಿಕೊಳ್ಳಬೇಕಿದೆ ಎಂದು ಅವರು ಕರೆ ನೀಡಿದ್ದಾರೆ.

ಪತ್ರಿಕೆಯೊಂದಕ್ಕೆ 'ಬುಲ್ಡೋಜರ್‌ ಮೂಲಕ ನರೇಗಾ ನೆಲಸಮ' ಎಂಬ ಶೀರ್ಷಿಕೆಯಡಿ ಲೇಖನ ಬರೆದಿರುವ ಸೋನಿಯಾ ಗಾಂಧಿ, ನರೇಗಾದ 'ಸಾವು' ಸಾಮೂಹಿಕ ವೈಫಲ್ಯ ಎಂದು ಹೇಳಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಕಸಿತ ಭಾರತ-ಉದ್ಯೋಗ ಖಾತರಿ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) ('ವಿಬಿ-ಜಿ ರಾಮ್ ಜಿ) ಮಸೂದೆಗೆ ಅಂಕಿತ ಹಾಕಿದ ಮಾರನೇ ದಿನ ಈ ಪ್ರತಿಕ್ರಿಯೆ ಹೊರಬಿದ್ದಿದೆ.

'ನರೇಗಾ ಯೋಜನೆ ಮಹಾತ್ಮ ಗಾಂಧಿ ಪ್ರಣೀತ ಸರ್ವೋದಯದ ಕಲ್ಪನೆಯಾಗಿತ್ತು ಮತ್ತು ಸಾಂವಿಧಾನಿಕವಾಗಿ ಉದ್ಯೋಗದ ಹಕ್ಕನ್ನು ನೀಡಿತ್ತು' ಎಂದು ಸೋನಿಯಾ ಗಾಂಧಿ ಪ್ರತಿಪಾದಿಸಿದ್ದಾರೆ.

'ಗ್ರಾಮೀಣರ ಸಂಕಷ್ಟಗಳಿಗೆ ಪರಿಹಾರ ಒದಗಿಸುತ್ತಿದ್ದ ಉದ್ಯೋಗ ಖಾತರಿ ಯೋಜನೆಯನ್ನು ಕೇಂದ್ರ ಸರ್ಕಾರ ಬುಡಸಮೇತ ಧ್ವಂಸ ಮಾಡಿದೆ. ಭಾರತ ಸಂವಿಧಾನದ 41ನೇ ವಿಧಿಯಿಂದ ಪ್ರೇರಿತವಾಗಿ ಹಕ್ಕು ಆಧಾರಿತ ನರೇಗಾ ಕಾನೂನು ತರಲಾಗಿತ್ತು. ಇದು ಜನರಿಗೆ ಉದ್ಯೋಗದ ಹಕ್ಕನ್ನು ನೀಡಲು ಸರ್ಕಾರವನ್ನು ಬದ್ಧಗೊಳಿಸಿತ್ತು' ಎಂದು ಬರೆದಿದ್ದಾರೆ.

ವರ್ಷ ಪೂರ್ತಿ ಉದ್ಯೋಗ ಈಗ ಉಳಿದಿಲ್ಲ:

'ವಿಬಿ- ಜಿ ರಾಮ್‌ ಜಿ ಎನ್ನುವುದು ಅಧಿಕಾರಶಾಹಿಯ ನಿಬಂಧನೆಗಳ ಪಟ್ಟಿಯಲ್ಲದೇ ಬೇರೇನೂ ಅಲ್ಲ. ವಿವೇಚನೆಯಿಂದಲೇ ಕಾಯ್ದೆಯ ಅವಕಾಶಗಳನ್ನು ಮೊಟಕು ಮಾಡಲಾಗಿದೆ. ವರ್ಷ ಪೂರ್ತಿ ಉದ್ಯೋಗ ಖಾತ್ರಿ ಈಗ ಉಳಿದಿಲ್ಲ. ಜನರ ಅಗತ್ಯಕ್ಕಿಂತ ಕೇಂದ್ರ ಸರ್ಕಾರದ ಆದ್ಯತೆ ಮುಖ್ಯವಾಗಿದೆ. ಕೇಂದ್ರ ತನ್ನ ಅನುದಾನವನ್ನೂ ಕಡಿತ ಮಾಡಿದೆ' ಎಂದಿದ್ದಾರೆ.

'ಯೋಜನೆ ವೆಚ್ಚದ ಪಾಲನ್ನು ರಾಜ್ಯಗಳಿಗೂ (60:40ರಂತೆ) ವರ್ಗಾಯಿಸುತ್ತಿರುವುದು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯಗಳ ಸ್ಥಿತಿ ಇನ್ನಷ್ಟು ಹದಗೆಡುವಂತೆ ಮಾಡಲಿದೆ. ಅವು ಉದ್ಯೋಗ ನೀಡಲು ಕಷ್ಟವಾಗಲಿದೆ' ಎಂದರು.

ಗಾಂಧಿ ಚಿಂತನೆ ಮೇಲಿನ ದಾಳಿ: ಹರಿಪ್ರಸಾದ್‌

ನರೇಗಾಕ್ಕೆ ಪರ್ಯಾಯವಾದ ವಿಬಿ-ಜಿ ರಾಮ್ ಜಿ ಕಾಯ್ದೆಯ ಮೂಲಕ ಮಹಾತ್ಮ ಗಾಂಧಿ ಅವರ ಚಿಂತನೆಗಳ ಮೇಲೆ ನೇರವಾಗಿ ದಾಳಿ ನಡೆಸಲಾಗಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ಸೋಮವಾರ ದೂರಿದರು. ಬಡಜನರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ಪಿತೂರಿ ನಡೆದಿದೆ ಎಂದು ಆರೋಪಿಸಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯು ಗಾಂಧಿ ಅವರ 'ಗ್ರಾಮ ಸ್ವರಾಜ್‌' ಘನತೆಯ ಉದ್ಯೋಗ ಮತ್ತು ಅಭಿವೃದ್ಧಿಯ ವಿಕೇಂದ್ರೀಕರಣ ಪರಿಕಲ್ಪನೆಗೆ ನೈಜ ಉದಾಹರಣೆಯಾಗಿತ್ತು ಎಂದು ಹೇಳಿದರು. ಮೋದಿ ಸರ್ಕಾರವು ನೂತನ ಕಾಯ್ದೆಯ ಮೂಲಕ ಮಹಾತ್ಮ ಗಾಂಧಿ ಅವರ ಹೆಸರನ್ನು ಮಾತ್ರ ಅಳಿಸಿಹಾಕಲಿಲ್ಲ 12 ಕೋಟಿಗೂ ಅಧಿಕ ನರೇಗಾ ಕಾರ್ಮಿಕದ ಹಕ್ಕನ್ನು ನಿರ್ದಾಕ್ಷಿಣ್ಯವಾಗಿ ಕಸಿದುಕೊಂಡಿದೆ ಎಂದು ಆರೋಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries