HEALTH TIPS

ಕೋಲ್ಕತ್ತ ಕ್ರೀಡಾಂಗಣದಲ್ಲಿ ದಾಂದಲೆ: ನ್ಯಾಯಾಂಗ ತನಿಖೆಗೆ ಒತ್ತಾಯ

ಕೋಲ್ಕತ್ತ: ಫುಟ್‌ಬಾಲ್ ಆಟಗಾರ ಅರ್ಜೆಂಟೀನಾದ ಲಿಯೊನೆಲ್‌ ಮೆಸ್ಸಿ ಅವರನ್ನು ನೋಡಲು ಸಾಧ್ಯವಾಗದ ಕಾರಣ ಅಭಿಮಾನಿಗಳು ದಾಂದಲೆ ನಡೆಸಿದ ಸಾಲ್ಟ್‌ಲೇಕ್‌ ಕ್ರೀಡಾಂಗಣಕ್ಕೆ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್‌ ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆ ಕುರಿತು ನ್ಯಾಯಾಂಗ ತನಿಖೆಗೆ ಕರೆ ನೀಡಿದರು.

'ದಾಂದಲೆಗೆ ಕಾರಣರಾದವರನ್ನು ತಕ್ಷಣವೇ ಬಂಧಿಸಬೇಕು. ಈ ಕಾರ್ಯಕ್ರಮಕ್ಕೆ ಟಿಕೆಟ್ ಖರೀದಿಸಿದ್ದವರಿಗೆ ಆಯೋಜಕರು ಟಿಕೆಟ್‌ನ ಸಂಪೂರ್ಣ ಮೊತ್ತವನ್ನು ಮರುಪಾವತಿಸಬೇಕು. ಭವಿಷ್ಯದಲ್ಲಿ ಇಂತಹ ಕಾರ್ಯಕ್ರಮಗಳನ್ನು ನಿರ್ವಹಿಸಲು ಪ್ರಮಾಣಿತ ಕಾರ್ಯಚರಣೆ ವಿಧಾನವೊಂದನ್ನು (ಎಸ್‌ಒಪಿ) ರೂಪಿಸಬೇಕು' ರಾಜ್ಯಪಾಲರು ಸರ್ಕಾರವನ್ನು ಒತ್ತಾಯಿಸಿದರು.

'ನಗರದಲ್ಲಿ ಆಯೋಜಿಸುವ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸ್ಪಷ್ಟವಾದ ಶಿಷ್ಟಾಚಾರ ಇರಬೇಕು. ಖಾಸಗಿ ಸಂಸ್ಥೆಗಳಿಗೆ ಕ್ರೀಡೆಯನ್ನು ವಾಣಿಜ್ಯೀಕರಣಗೊಳಿಸಿ ಹಣ ಮಾಡಲು ಸರ್ಕಾರ ಅವಕಾಶ ಕಲ್ಪಿಸುವಾಗ, ಸಾರ್ವಜನಿಕರು ಇದರ ಬಲಿಪಶುಗಳಾದಂತೆ ಎಚ್ಚರಿಕೆ ವಹಿಸಬೇಕು' ಎಂದು ರಾಜ್ಯಪಾಲರು ಎಚ್ಚರಿಕೆ ನೀಡಿದರು.

'ಶನಿವಾರ ನಾನು ಸಾಲ್ಟ್‌ಲೇಕ್‌ ಕ್ರೀಡಾಂಗಣಕ್ಕೆ ಪರಿಶೀಲನೆಗೆ ಬಂದಾಗ, ಕ್ರೀಡಾಂಗಣದ ಬಾಗಿಲು ಮುಚ್ಚಲಾಗಿತ್ತು ಮತ್ತು ದೀಪಗಳನ್ನು ಆರಿಸಲಾಗಿತ್ತು. ನನ್ನ ಭೇಟಿಯನ್ನು ಉದ್ದೇಶಪೂರ್ವಕವಾಗಿ ತಡೆಯುವ ಉದ್ದೇಶದಿಂದ ಹೀಗೆ ಮಾಡಲಾಗಿದೆ. ಕೋಲ್ಕತ್ತದ ಕ್ರೀಡಾಭಿಮಾನಿಗಳ ಪಾಲಿಗೆ ಶನಿವಾರ ಕಪ್ಪು ದಿನ' ಎಂದು ಅವರು ಆರೋಪಿಸಿದ್ದಾರೆ.

ತನಿಖಾ ಸಮಿತಿ ರಚನೆ

ಸರ್ಕಾರ ಘಟನೆಯ ಕುರಿತ ತನಿಖೆಗಾಗಿ ಕೋಲ್ಕತ್ತ ಹೈಕೊರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆಶಿಮ್‌ ಕುಮಾರ್‌ ರೇ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿದೆ. ಮೂವರು ಸದಸ್ಯರ ಈ ಸಮಿತಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್‌ ಪಂತ್‌, ಗೃಹ ಇಲಾಖೆ ಕಾರ್ಯದರ್ಶಿ ನಂದಿನಿ ಚಕ್ರವರ್ತಿಯೂ ಇದ್ದಾರೆ. ಕ್ರೀಡಾಂಗಣಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಿತಿ ಸದಸ್ಯರು, ಕ್ರೀಡಾಂಗಣದ ಅಧಿಕಾರಿಗಳಿಂದ ಹಾನಿಯ ವಿವರವನ್ನು ಪಡೆದರು. ವಿಡಿಯೊ ಚಿತ್ರೀಕರಣ ನಡೆಸಲಾಯಿತು.

-ಸಿ.ವಿ. ಆನಂದ ಬೋಸ್‌ ಪಶ್ಚಿಮ ಬಂಗಾಳದ ರಾಜ್ಯಪಾಲ ದಾಂದಲೆಯಲ್ಲಿ ತೊಂದರೆಗೆ ಒಳಗಾದವರ ಜತೆಗೂ ಮಾತುಕತೆ ನಡೆಸುತ್ತೇನೆ. ಬಳಿಕ ಶಿಫಾರಸುಗಳೊಂದಿಗೆ ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇನೆ ಸುವೇಂದು ಅಧಿಕಾರಿ ಪ.ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕಸಾಲ್ಟ್‌ಲೇಕ್‌ ಕ್ರೀಡಾಂಗಣದ ದಾಂದಲೆಗೆ ಸಂಬಂಧಿಸಿದಂತೆ ಆಡಳಿತಾತ್ಮಕ ಅದಕ್ಷತೆ ಮತ್ತು ಸಾರ್ವಜನಿಕರಿಗೆ ಆದ ಅವಮಾನ ಬಗ್ಗೆ ರಾಜ್ಯಪಾಲರು ಸ್ವತಂತ್ರ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು

ಮುಖ್ಯ ಆಯೋಜಕ 14 ದಿನ ಪೊಲೀಸ್‌ ಕಸ್ಟಡಿಗೆ

ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತ ಅವರನ್ನು ಬಿಧಾನನಗರ ಪೊಲೀಸರು ಶನಿವಾರ ರಾತ್ರಿ ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಕೋಲ್ಕತ್ತ ಕಾರ್ಯಕ್ರಮದ ಬಳಿಕ ಹೈದರಾಬಾದ್‌ನಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಹೊರಟ ಮೆಸ್ಸಿ ಮತ್ತು ತಂಡವನ್ನು ಬೀಳ್ಕೊಡಲು ಅವರು ವಿಮಾನ ನಿಲ್ದಾಣಕ್ಕೆ ಹೋಗಿದ್ದರು. ಶತಾದ್ರು ದತ್ತ ಅವರನ್ನು 14 ದಿನ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. 'ಈ ಪ್ರಕರಣದಲ್ಲಿ ಅವರನ್ನು ಬಲಿಪಶು ಮಾಡಲಾಗಿದೆ ಮತ್ತು ಸುಳ್ಳು ಆರೋಪ ಹೊರಿಸಲಾಗಿದೆ. ಮುಂದಿನ ಎರಡು ವಾರಗಳ ಪೊಲೀಸರ ತನಿಖೆಯಲ್ಲಿ ಇದರ ಸ್ಪಷ್ಟತೆ ಲಭಿಸಲಿದೆ' ಎಂದು ಶತಾದ್ರು ಪರ ವಕೀಲರು ಹೇಳಿದ್ದಾರೆ.

ಇಂದು ದೆಹಲಿಯಲ್ಲಿ ಕಾರ್ಯಕ್ರಮ; ಬಿಗಿ ಭದ್ರತೆ

ಕೋಲ್ಕತ್ತದ ಸಾಲ್ಟ್‌ಲೇಕ್‌ ಕ್ರೀಡಾಂಗಣದಲ್ಲಿ ದಾಂದಲೆ ನಡೆದ ಬೆನ್ನಲ್ಲೇ ಸೋಮವಾರ ದೆಹಲಿಯಲ್ಲಿ ಮೆಸ್ಸಿ ಕಾರ್ಯಕ್ರಮ ನಡೆಯಲಿರುವ ಅರುಣ್‌ ಜೇಟ್ಲಿ ಕ್ರೀಡಾಂಗಣಕ್ಕೆ ಅಲ್ಲಿನ ಪೊಲೀಸರು ಬಹು ಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದಾರೆ. ಕ್ರೀಡಾಂಗಣದಲ್ಲಿ ಮಧ್ಯಾಹ್ನ 1ರಿಂದ ಸಂಜೆ 4ರ ಒಳಗೆ ಮೆಸ್ಸಿ ಕಾರ್ಯಕ್ರಮ ನಿಗದಿಯಾಗಿದೆ. ಜನದಟ್ಟಣೆ ಸಂಚಾರ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಕ್ರೀಡಾಂಗಣ ಪ್ರವೇಶ ದ್ವಾರದಲ್ಲಿ ನೂಕು ನುಗ್ಗಲು ತಪ್ಪಿಸಲು ಪರ್ಯಾಯ ಕ್ರಮ ವಹಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries