ನವದೆಹಲಿ: ಪಂಚಾಯಿತಿಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ 'ಪರೋಕ್ಷ ಆಡಳಿತ' ಇರುವ ಕುರಿತ ಆರೋಪಗಳಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಲು ವಿಫಲವಾಗಿರುವ 24 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳ ಪಂಚಾಯತ್ರಾಜ್ ಇಲಾಖೆಗಳ ಉನ್ನತ ಅಧಿಕಾರಿಗಳಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ಎಚ್ಆರ್ಸಿ) ಸಮನ್ಸ್ ಜಾರಿ ಮಾಡಿದೆ.
ಸಂಬಂಧಪಟ್ಟ ಅಧಿಕಾರಿಗಳು ಡಿಸೆಂಬರ್ 30ರಂದು ಬೆಳಿಗ್ಗೆ 11ಕ್ಕೆ ತನ್ನ ಮುಂದೆ ಖುದ್ದಾಗಿ ಹಾಜರಾಗಬೇಕು ಎಂದು ಆಯೋಗ ಸೂಚಿಸಿದೆ.
ಪಂಚಾಯಿತಿಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ 'ಪರೋಕ್ಷ ಆಡಳಿತ' ಇದೆ ಎಂದು ಹರಿಯಾಣದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಸುಶೀಲ್ ವರ್ಮಾ ದೂರು ನೀಡಿದ್ದರು. ಎನ್ಎಚ್ಆರ್ಸಿ ಸದಸ್ಯ ಪ್ರಿಯಾಂಕ್ ಕನೂಂಗೊ ನೇತೃತ್ವದ ಪೀಠವು ಈ ದೂರನ್ನು ಡಿಸೆಂಬರ್ 12ರಂದು ವಿಚಾರಣೆಗೆ ಕೈಗೆತ್ತಿಕೊಂಡು, ಈ ಸಮನ್ಸ್ ನೀಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಪಂಚಾಯಿತಿಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಮಹಿಳೆಯರ ಪರವಾಗಿ ಅವರ ಪತಿ ಅಥವಾ ಮಹಿಳೆಯ ಸಂಬಂಧಿಕ ಪುರುಷರೇ ಅಧಿಕಾರ ಚಲಾಯಿಸುತ್ತಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಇದನ್ನು 'ಸರಪಂಚ ಪತಿ' ಎಂದು ಕರೆಯಲಾಗುತ್ತದೆ.
ಆಡಳಿತ ನಡೆಸುವ ಮತ್ತು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಚುನಾಯಿತ ಮಹಿಳೆಯಿಂದ ಕಸಿದುಕೊಳ್ಳಲಾಗಿದೆ. ಅವರನ್ನು ಹೆಸರಿಗೆ ಮಾತ್ರ ಪಂಚಾಯಿತಿ/ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದೂ ಆರೋಪಿಸಲಾಗಿದೆ.
ಇಂತಹ ನಡೆಗಳು ಅಸಾಂವಿಧಾನಿಕ ಹಾಗೂ ಕಾನೂನುಬಾಹಿರ ಎಂಬುದಾಗಿ ಸುಪ್ರೀಂ ಕೋರ್ಟ್ ತನ್ನ ಹಲವಾರು ತೀರ್ಪುಗಳಲ್ಲಿ ಹೇಳಿದೆ. 'ಸರಪಂಚ ಪತಿ' ವ್ಯವಸ್ಥೆಯು ಸಂವಿಧಾನದ 73 ಹಾಗೂ 74ನೇ ತಿದ್ದುಪಡಿಗಳ ಉಲ್ಲಂಘನೆಯೂ ಆಗಿದೆ ಎಂದು ಆಯೋಗ ತಿಳಿಸಿದೆ.

