ಪ್ರದರ್ಶನಾ ಫಲಕಗಳನ್ನು ಹಿಡಿದುಕೊಂಡ ಪ್ರತಿಭಟನಕಾರರು ಉನ್ನಾವೋ ಅತ್ಯಾಚಾರ ಸಂತ್ರಸ್ತೆಯನ್ನು ಬೆಂಬಲಿಸಿ ''ಅತ್ಯಾಚಾರಿಗಳನ್ನು ರಕ್ಷಿಸುವುದನ್ನು ನಿಲ್ಲಿಸಿ'' ಎಂದು ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ್ತಿ ಯೋಗಿತಾ ಭಯಾನಾ ಹಾಗೂ ಸಂತ್ರಸ್ತೆಯ ತಾಯಿಯೊಂದಿಗೆ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆ (ಎಐಡಿಡಬ್ಲುಎ) ಯ ಮಹಿಳಾ ಹೋರಾಟಗಾರರು ಪಾಲ್ಗೊಂಡಿದ್ದರು.
ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸಂತ್ರಸ್ತೆಯ ತಾಯಿ, ನನ್ನ ಮಗಳು ತುಂಬಾ ಕಷ್ಟ ಅನುಭವಿಸಿದ್ದರಿಂದ ಪ್ರತಿಭಟಿಸಲು ಉಚ್ಚ ನ್ಯಾಯಾಲಯಕ್ಕೆ ಬಂದಿದ್ದೇನೆ ಎಂದು ಹೇಳಿದರು.
''ನಾನು ಇಡೀ ಉಚ್ಚ ನ್ಯಾಯಾಲಯವನ್ನು ದೂಷಿಸುತ್ತಿಲ್ಲ. ನಮ್ಮ ನಂಬಿಕೆಯನ್ನು ನುಚ್ಚು ನೂರು ಮಾಡಿದ ಆದೇಶ ನೀಡಿದ ಇಬ್ಬರು ನ್ಯಾಯಾಧೀಶರನ್ನು ಮಾತ್ರ ದೂಷಿಸುತ್ತೇನೆ'' ಎಂದು ಹೇಳಿದರು.
ಹಿಂದಿನ ನ್ಯಾಯಾಧೀಶರು ನಮ್ಮ ಕುಟುಂಬಕ್ಕೆ ನ್ಯಾಯಾ ನೀಡಿದ್ದರು. ಆದರೆ, ಈಗ ಆರೋಪಿಗಳಿಗೆ ಜಾಮೀನು ನೀಡಲಾಗಿದೆ ಎಂದು ತಿಳಿಸಿದರು.
''ಇದು ನಮ್ಮ ಕುಟುಂಬಕ್ಕೆ ಆದ ಅನ್ಯಾಯ. ನನಗೆ ನ್ಯಾಯಾಲಯದಲ್ಲಿ ನಂಬಿಕೆ ಇರುವುದರಿಂದ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲಿದ್ದೇನೆ'' ಎಂದು ಹೇಳಿದರು.
ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕುಲದೀಪ್ ಸೆಂಗಾರ್‌ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ದಿಲ್ಲಿ ಉಚ್ಚ ನ್ಯಾಯಾಲಯ ಮಂಗಳವಾರ ಆದೇಶಿಸಿದೆ. ವಿಚಾರಣಾ ನ್ಯಾಯಾಲಯ ಡಿಸೆಂಬರ್ 2019ರಂದು ಕುಲದೀಪ್ ಸೆಂಗಾರ್‌ಗೆ ಜೀವಾವಧಿ ಶಿಕ್ಷೆ ನೀಡಿತ್ತು. ಇದನ್ನು ಪ್ರಶ್ನಿಸಿ ಆತ ಮೇಲ್ಮನವಿ ಸಲ್ಲಿಸಿದ್ದ. ಈ ಮೇಲ್ಮನವಿಯ ವಿಚಾರಣೆ ಬಾಕಿ ಇರುವಾಗಲೇ ಉಚ್ಚ ನ್ಯಾಯಾಲಯ ಜಾಮೀನು ನೀಡಿದೆ.

