ಭುವನೇಶ್ವರ: ಇಸ್ಕಾನ್ ಸಂಸ್ಥೆಯು 'ಶ್ರೀ ಜಗನ್ನಾಥ ಸಂಸ್ಕೃತಿ'ಯ ವಿರುದ್ಧ ತಪ‍್ಪು ಮಾಹಿತಿ ಹರಡುತ್ತಿದೆ ಎಂದು ಪುರಿಯ ಶ್ರೀ ಜಗನ್ನಾಥ ದೇವಾಲಯ ವ್ಯವಸ್ಥಾಪನಾ ಸಮಿತಿಯ (ಎಸ್‌ಜೆಟಿಎಂಸಿ) ಅಧ್ಯಕ್ಷ ಗಜಪತಿ ಮಹಾರಾಜ ದಿಬ್ಯಾಸಿಂಘ ದೇಬ್ ಅವರು ಸೋಮವಾರ ಆರೋಪಿಸಿದ್ದಾರೆ.
'ಜಗನ್ನಾಥ ಸಂಸ್ಕೃತಿ' ಎಂದರೆ ಒಡಿಶಾದ ಪುರಿ ಜಗನ್ನಾಥ ದೇವಾಲಯದ ಆರಾಧನೆಯ ಸಂಪ್ರದಾಯ, ಆಚರಣೆಗಳು ಮತ್ತು ತಾತ್ವಿಕ ನಂಬಿಕೆಗಳಾಗಿವೆ. ಪುರಿ ದೇವಾಲಯದ ನಿರ್ಧಾರ ತೆಗೆದುಕೊಳ್ಳುವ ಸಮಿತಿಯಾದ ಎಸ್‌ಜೆಟಿಎಂಸಿ ಅಧ್ಯಕ್ಷರೂ, ಪುರಿಯ ನಾಮಕಾವಸ್ಥೆ ರಾಜರೂ ಆಗಿರುವ ದಿಬ್ಯಾಸಿಂಘ ದೇಬ್, ಇಸ್ಕಾನ್ ನಡೆಸುವ ಅಕಾಲಿಕ ರಥಯಾತ್ರೆಯನ್ನು ವಿರೋಧಿಸುವಂತೆ ಭಕ್ತರು ಮತ್ತು ಧಾರ್ಮಿಕ ಮುಖಂಡರಿಗೆ ಕರೆ ನೀಡಿದ್ದಾರೆ.
'ಧರ್ಮಗ್ರಂಥಗಳಿಂದ ಅನುಮೋದಿಸದ ದಿನಾಂಕಗಳಂದು ರಥಯಾತ್ರೆ ನಡೆಸುವುದು ಸಂಪ್ರದಾಯ ವಿರೋಧಿಯಾಗಿದ್ದು, ಇದು ಜಗನ್ನಾಥ ಸಂಸ್ಕೃತಿಯ ಪಾವಿತ್ರ್ಯಕ್ಕೆ ಅಪಾಯವನ್ನುಂಟು ಮಾಡಿದೆ' ಎಂದು ಅವರು ಆರೋಪಿಸಿದ್ದಾರೆ.

