ನವದೆಹಲಿ (PTI): ಕ್ರಿಸ್‌ಮಸ್ ಆರಂಭದ ದಿನವಾದ ಡಿಸೆಂಬರ್ 22 ಮತ್ತು ಹೊಸ ವರ್ಷದ ರಜಾ ದಿನಗಳಂದೂ ತುರ್ತು ಅರ್ಜಿಗಳ ವಿಚಾರಣೆ ನಡೆಸಲು ಸಿದ್ಧ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಶುಕ್ರವಾರ ತಿಳಿಸಿದರು.
ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಂಚೋಲಿ ಅವರ ನೇತೃತ್ವದ ನ್ಯಾಯಪೀಠವು, 'ಅರ್ಜಿಗಳ ತುರ್ತು ವಿಚಾರಣೆಯ ಅಗತ್ಯವನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯು ಪರಿಶೀಲಿಸಿ, ಪಟ್ಟಿ ಮಾಡಲಿದೆ' ಎಂದು ತಿಳಿಸಿತು.
'ನಾವು ಸೋಮವಾರವೂ ನ್ಯಾಯಪೀಠದಲ್ಲಿ ಕುಳಿತು ಅರ್ಜಿಗಳ ವಿಚಾರಣೆ ನಡೆಸುತ್ತೇವೆ. ಸುಪ್ರೀಂ ಕೋರ್ಟ್‌ನ ಇತರ ನ್ಯಾಯಮೂರ್ತಿಗಳಿಗೆ ಹೆಚ್ಚಿನ ಹೊರೆ ಹೇರಲು ಇಚ್ಛಿಸುವುದಿಲ್ಲ. ಇತರೆ ನ್ಯಾಯಪೀಠಗಳಿಗೆ ತೊಂದರೆ ನೀಡುವುದಿಲ್ಲ' ಎಂದು ಸಿಜೆಐ ಹೇಳಿದರು.
'ರಜಾ ದಿನದಂದು ಒಂದು ಅಥವಾ ಎರಡು ನ್ಯಾಯಪೀಠಗಳು ಅರ್ಜಿಗಳನ್ನು ವಿಚಾರಣೆ ನಡೆಸಬಹುದು. ತುರ್ತು ವಿಚಾರಣೆ ಅಗತ್ಯವಿರುವ ಪ್ರಕರಣಗಳನ್ನು ಆಧರಿಸಿ ಅದನ್ನು ನಿರ್ಧರಿಸಲಾಗುವುದು' ಎಂದು ತಿಳಿಸಿದರು.
ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಅಂಗವಾಗಿ ಡೆಸೆಂಬರ್ 22ರಿಂದ ಜನವರಿ 2ರವರೆಗೆ ಸುಪ್ರೀಂ ಕೋರ್ಟ್‌ಗೆ ರಜೆ ಇರಲಿದೆ.

