ನವದೆಹಲಿ: ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಸಂಸದ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.
ಆ ಮೂಲಕ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಕಾರ್ಯವೈಖರಿ, ಸಂಘಟನಾ ಚತುರತೆ ಹೊಗಳಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಬೆನ್ನಲ್ಲೇ, ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದರು.
ಆದರೆ ದಿಗ್ವಿಜಯ್ ಸಿಂಗ್ ಅವರಿಗೆ ಬೆಂಬಲ ಸೂಚಿಸಿರುವ ತರೂರ್, 'ಪಕ್ಷದ ಸಂಘಟನೆಯನ್ನು ಬಲಪಡಿಸಬೇಕು. ಅದರಲ್ಲಿ ಯಾವುದೇ ಅನುಮಾನ ಇಲ್ಲ' ಎಂದಿದ್ದಾರೆ.
ಕಾಂಗ್ರೆಸ್ 140ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ದಿಗ್ವಿಜಯ್ ಪಕ್ಕದಲ್ಲೇ ಕುಳಿತಿದ್ದಾಗ ಈ ಕುರಿತು ಚರ್ಚಿಸಿದ್ದಾರೆಯೇ ಎಂದು ಕೇಳಿದಾಗ, 'ನಾವಿಬ್ಬರೂ ಪರಸ್ಪರ ಮಾತನಾಡುತ್ತಲೇ ಇರುತ್ತೇವೆ. ನಾವಿಬ್ಬರು ಸ್ನೇಹಿತರು' ಎಂದು ಹೇಳಿದ್ದಾರೆ.
'ಇಂದು ಕಾಂಗ್ರೆಸ್‌ನ 140ನೇ ಸಂಸ್ಥಾಪನಾ ದಿನವಾಗಿದೆ. ಇದು ಅತ್ಯಂತ ಮುಖ್ಯವಾದ ಕಾರ್ಯಕ್ರಮವಾಗಿದೆ. ರಾಷ್ಟ್ರಕ್ಕೆ ಪಕ್ಷವು ನೀಡಿದ ಕೊಡುಗೆಗಳನ್ನು ಸ್ಮರಿಸುವ ದಿನವಾಗಿದೆ' ಎಂದು ಹೇಳಿದ್ದಾರೆ.
'ನೆಲದ ಮೇಲೆ ಕುಳಿತುಕೊಳ್ಳುವ ತಳಮಟ್ಟದ ಕಾರ್ಯಕರ್ತರು ಸಂಘ ಪರಿವಾರ ಮತ್ತು ಬಿಜೆಪಿಯ ರಾಜಕೀಯ ಪರಿಸರದಲ್ಲಿ ಹೇಗೆ ಬೆಳೆದು ಮುಖ್ಯಮಂತ್ರಿ ಮತ್ತು ಪ್ರಧಾನಿ ಆಗಬಹುದು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ನಿದರ್ಶನ' ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ಶ್ಲಾಘಿಸಿದ್ದರು.

