ಜಗದೀಪ್ ಧನಕರ್ ಅವರು ಆರೋಗ್ಯದ ಕಾರಣಗಳನ್ನು ನೀಡಿ, ಸಂಸತ್‌ನ ಮುಂಗಾರು ಅಧಿವೇಶನದ ಮೊದಲ ದಿನವಾದ ಜುಲೈ 21ರಂದು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
ವಾರಗಳ ತರುವಾಯ, ಸೆಪ್ಟೆಂಬರ್‌ನಲ್ಲಿ ಅವರು ಅಧಿಕೃತ ನಿವಾಸವಾದ ಉಪರಾಷ್ಟ್ರಪತಿ ಭವನವನ್ನು ತೆರವುಗೊಳಿಸಿದ್ದರು. ಆನಂತರ ಅವರು ದಕ್ಷಿಣ ದಿಲ್ಲಿಯ ಛತ್ತರ್‌ಪುರ ಪ್ರದೇಶದಲ್ಲಿರುವ ಖಾಸಗಿ ಫಾರ್ಮ್ ಹೌಸ್ ಒಂದರಲ್ಲಿ ನೆಲೆಸಿದ್ದರು. ಛತ್ತರ್‌ಪುರದ ಗಡಾಯ್‌ಪುರ ಪ್ರದೇಶದಲ್ಲಿರುವ ಈ ಫಾಮ್‌ಹೌಸ್ ಐಎನ್‌ಎಲ್‌ಡಿ ನಾಯಕ ಅಭಯ್ ಚೌಟಾಲಾ ಅವರಿಗೆ ಸೇರಿದ್ದಾಗಿದೆ.
ಆಗಸ್ಟ್ 22ರಂದು ಧನಕರ್ ಅವರು ಗೃಹ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯವರಿಗೆ ಪತ್ರ ಬರೆದು ಮಾಜಿ ಉಪರಾಷ್ಟ್ರಪತಿಯವರಿಗೆ ದೊರೆಯಬೇಕಾದ ಅಧಿಕೃತ ನಿವಾಸವನ್ನು ತನಗೆ ನೀಡುವಂತೆ ಕೋರಿದ್ದರು. ಆದಾಗ್ಯೂ, ಅವರಿಗೆ ದೊರೆಯಬೇಕಾದ ನಿವಾಸವನ್ನು ಈವರೆಗೆ ಒದಗಿಸಲಾಗಿಲ್ಲವೆಂದು ಎಂದು ಅವರ ಆಪ್ತರೊಬ್ಬರು ತಿಳಿಸಿದ್ದಾರೆ.
ಮಾಜಿ ಉಪರಾಷ್ಟ್ರಪತಿಯಾಗಿ ಧನಕರ್ ಅವರು 2 ಲಕ್ಷ ರೂ. ಮಾಸಿಕ ಪಿಂಚಣಿ, ಟೈಪ್ 8 ಬಂಗಲೆ, ಓರ್ವ ಖಾಸಗಿ ಕಾರ್ಯದರ್ಶಿ, ಓರ್ವ ಹೆಚ್ಚುವರಿ ಆಪ್ತ ಕಾರ್ಯದರ್ಶಿ, ಓರ್ವ ಖಾಸಗಿ ಸಹಾಯಕ, ಓರ್ವ ವೈದ್ಯ, ಓರ್ವ ನರ್ಸಿಂಗ್ ಅಧಿಕಾರಿ ಹಾಗೂ ನಾಲ್ವರು ಖಾಸಗಿ ಪರಿಚಾರಕರನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ.

