ಪತ್ತನಂತಿಟ್ಟ: ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವಾಂಕುರು ದೇವಸ್ವಂ ಮಂಡಳಿ (ಟಿಡಿಬಿ)ಯ ಮಾಜಿ ಆಡಳಿತಾಧಿಕಾರಿ ಎಸ್. ಶ್ರೀಕುಮಾರ್ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಮಾಡುತ್ತಿದೆ.
ಎರಡು ವಾರಗಳ ಹಿಂದೆ ಕೇಳ ಹೈಕೋರ್ಟ್ ಟಿಡಿಬಿಯ ಮಾಜಿ ಆಡಳಿತಾಧಿಕಾರಿ ಎಸ್.ಶ್ರೀಕುಮಾರ್ ಹಾಗೂ ಮಾಜಿ ಕಾರ್ಯದರ್ಶಿ ಎಸ್. ಜಯಶ್ರೀ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಈ ಇಬ್ಬರು ಆರೋಪಿಗಳಿಗೆ ಜಾಮೀನು ನೀಡಿದರೆ ತನಿಖೆಯ ದಾರಿ ತಪ್ಪುತ್ತದೆ ಎಂದು ಎಸ್‌ಐಟಿ ಪೊಲೀಸರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಗರ್ಭಗುಡಿ ಬಾಗಿಲಿನ ಚೌಕಟ್ಟು ಹಾಗೂ ದ್ವಾರಪಾಲಕ ವಿಗ್ರಹಗಳು ಚಿನ್ನದಿಂದ ನಿರ್ಮಾಣ ಮಾಡಲಾಗಿತ್ತು ಎಂಬುದು ಗೊತ್ತಿದ್ದರೂ ಅವು ತಾಮ್ರದವು ಎಂದು ಉಲ್ಲೇಖಿಸಿ ದಾಖಲೆಗಳಿಗೆ ಅವರು ಸಹಿ ಹಾಕಿರುವುದನ್ನು ನ್ಯಾಯಾಲಯ ಗಮನಿಸಿತ್ತು.
ಶಬರಿಮಲೆ ದೇಗುಲದ ದ್ವಾರಪಾಲಕರ ವಿಗ್ರಹಗಳಲ್ಲಿ ಮತ್ತು ಶ್ರೀಕೋವಿಲ್‌ನ (ಗರ್ಭಗುಡಿ) ಬಾಗಿಲಿನ ಚೌಕಟ್ಟುಗಳಿಂದ ಚಿನ್ನ ಕಣ್ಮರೆ ಪ್ರಕರಣದಲ್ಲಿ ಇಲ್ಲಿಯವರೆಗೂ 6 ಆರೋಪಿಗಳನ್ನು ಬಂಧಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಶ್ರೀಕುಮಾರ್ ಏಳನೇ ವ್ಯಕ್ತಿ ಆಗಿದ್ದಾರೆ. ಇವರಿಗೆ ಮೊದಲು, ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಹಾಗೂ ಮಾಜಿ ಟಿಡಿಬಿ ಅಧ್ಯಕ್ಷರಾದ ಎನ್.ವಾಸು ಮತ್ತು ಎ.ಪದ್ಮಕುಮಾರ್ ಸೇರಿದಂತೆ ಇನ್ನೂ ಆರು ಮಂದಿ ಈ ಪ್ರಕರಣಗಳಲ್ಲಿ ಬಂಧಿತರಾಗಿದ್ದಾರೆ.

