ಗೋಲಾಘಾಟ್: 'ಭಾರತದ ಅರಣ್ಯ ಮನುಷ್ಯ' ಎಂದು ಕರೆಯಲ್ಪಡುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾದವ್ ಪೆಯಾಂಗ್ ಅವರು ನಿರ್ಮಿಸಿದ್ದ ಅರಣ್ಯಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿಯಿಂದಾಗಿ ಸಾವಿರಾರು ಸಸ್ಯಗಳು ಸೇರಿದಂತೆ ಕೆಲವು ಪ್ರಾಣಿಗಳು ಸುಟ್ಟುಹೋಗಿವೆ. ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪೆಯಾಂಗ್ ಅವರು ನಿರ್ಮಿಸಿರುವ 'ಮೊಲೈ ಕಟೋನಿ' ಎಂದು ಕರೆಯಲ್ಪಡುವ ಕಾಡಿಗೆ ದುಷ್ಕರ್ಮಿಗಳು ಭಾನುವಾರ ಸಂಜೆ ಬೆಂಕಿ ಹಚ್ಚಿದ್ದಾರೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಬ್ರಹ್ಮಪುತ್ರ ನದಿಯ ದಡದಲ್ಲಿ ಪೆಯಾಂಗ್ ಅವರು 'ಮೊಲೈ ಕಟೋನಿ' ಅರಣ್ಯವನ್ನು ನಿರ್ಮಿಸಿದ್ದಾರೆ. ಬೆಂಕಿ ಕಾಡ್ಗಿಚ್ಚಿನಂತೆ ಹರಡಿದ್ದರಿಂದ 2022ರಲ್ಲಿ ಪೆಯಾಂಗ್ ಮತ್ತು ಅವರ ಮಗಳು ನೆಟ್ಟಿದ್ದ 5,500ಕ್ಕೂ ಹೆಚ್ಚು ಸಸಿಗಳು ಬೆಂಕಿಗೆ ಆಹುತಿಯಾಗಿವೆ' ಎಂದೂ ಅವರು ವಿವರಿಸಿದ್ದಾರೆ.
'ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿಯೇ ಅರಣ್ಯಕ್ಕೆ ಬೆಂಕಿ ಹಚ್ಚಿದ್ದಾರೆ' ಎಂದು ಜಾದವ್ ಅವರ ಪುತ್ರಿ ಮುನ್ಮುನಿ ಪೆಯಾಂಗ್ ಬೇಸರ ಹೊರಹಾಕಿದ್ದಾರೆ.

