ನವದೆಹಲಿ: ಟಾಟಾ ಸಮೂಹ ಒಡೆತನದ ಏರ್ ಇಂಡಿಯಾ ಸಂಸ್ಥೆಯು ಖಾಸಗೀಕರಣಗೊಂಡ 4 ವರ್ಷಗಳ ಬಳಿಕ ಇದೀಗ ತನ್ನ ಮೊದಲ ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನವನ್ನು ಪಡೆದುಕೊಂಡಿದೆ.
ಏರ್ ಇಂಡಿಯಾ ಸಂಸ್ಥೆಗಾಗಿಯೇ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಿದ (ಲೈನ್ ಫಿಟ್/ಕಸ್ಟಮ್ ಮೇಡ್) ಮೊದಲ ವಿಮಾನ ಇದಾಗಿದ್ದು, ಸಿಯಾಟಲ್‌ನಲ್ಲಿರುವ ಬೋಯಿಂಗ್ ಫ್ಯಾಕ್ಟರಿಯಲ್ಲಿ ಈ ವಿಮಾನದ ಹಸ್ತಾಂತರ ಪ್ರಕ್ರಿಯೆಯು ಜನವರಿ 7ರಂದು ನಡೆದಿದೆ ಎಂದು ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ.
ಅಲ್ಲದೇ, ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ವಿಮಾನವನ್ನು ಪರಿಶೀಲಿಸಿದ ಬಳಿಕ ಕೆಲವೇ ದಿನಗಳಲ್ಲಿ ವಿಮಾನ ಭಾರತಕ್ಕೆ ಬರಲಿದೆ ಎಂದೂ ತಿಳಿಸಿದ್ದಾರೆ.
ಈ ವಿಮಾನವು ಎಕಾನಮಿ, ಪ್ರೀಮಿಯಂ ಎಕಾನಮಿ ಹಾಗೂ ಬಿಸಿನೆಸ್ ಕ್ಲಾಸ್ ವಿಭಾಗವನ್ನು ಹೊಂದಿದೆ. ಇದಕ್ಕೂ ಮೊದಲು ಏರ್ ಇಂಡಿಯಾ ಸಂಸ್ಥೆಯು ಸರ್ಕಾರಿ ಒಡೆತನದಲ್ಲಿದ್ದಾಗ ಅಂದರೆ 2017ರಲ್ಲಿ ಕಡೆಯದಾಗಿ ಅದಕ್ಕಾಗಿಯೇ ವಿನ್ಯಾಸಗೊಳಿಸಿದ್ದ ಡ್ರೀಮ್‌ಲೈನರ್ ವಿಮಾನವನ್ನು ಪಡೆದುಕೊಂಡಿತ್ತು ಎನ್ನಲಾಗಿದೆ.

