ಡಿಜಿಟಲ್ ವ್ಯಸನದ ಪರಿಣಾಮವಾಗಿ ಪ್ರತಿವರ್ಷ ಸುಮಾರು 20,000 ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಬಿಕ್ಕಟ್ಟನ್ನು ತುರ್ತಾಗಿ ಪರಿಹರಿಸಲು ಸರಕಾರ ಕ್ರಮ ತೆಗೆದುಕೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಡೆರೆಕ್ ಓಬ್ರಿಯಾನ್, ಮಕ್ಕಳು ಹಾಗೂ ಯುವಕರು ದಿನಕ್ಕೆ ಎಂಟು ಗಂಟೆಗಳ ಕಾಲ ಮೊಬೈಲ್ ಫೋನ್‌ನಲ್ಲೇ ಕಳೆಯುತ್ತಿದ್ದಾರೆ ಎಂದು ಅಧ್ಯಯನ ಹೇಳುತ್ತದೆ. ಇದು ಪ್ರತಿ ವರ್ಷ 100ಕ್ಕೂ ಹೆಚ್ಚು ದಿನಗಳಿಗೆ ಸಮಾನವಾಗಿದೆ ಎಂದರು. 68 ದೇಶಗಳು ಶಾಲೆಗಳಲ್ಲಿ ಮೊಬೈಲ್ ಫೋನ್‌ಗೆ ಈಗಾಗಲೇ ನಿಷೇಧ ಹೇರಿವೆ ಎಂದು ಅವರು ಗಮನ ಸೆಳೆದರು.
ಮೊಬೈಲ್‌ನಲ್ಲಿ ಅತಿಯಾದ ಸಮಯ ಕಳೆಯುವುದರಿಂದ ನಿದ್ರೆಗೆ ಅಡ್ಡಿ ಉಂಟಾಗುತ್ತದೆ, ಆತಂಕದ ಅಪಾಯವನ್ನು ಹೆಚ್ಚಿಸುತ್ತದೆ ಹಾಗೂ ಮನಸ್ಥಿತಿಯಲ್ಲಿ ಏರುಪೇರಾಗಲು ಕಾರಣವಾಗುತ್ತದೆ ಎಂದು ಹೇಳಿದರು.
ಮೊಬೈಲ್ ಬಳಕೆಯು ಡೊಪಮೈನ್‌ನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಮೆದುಳು ತ್ವರಿತವಾಗಿ ಪ್ರತಿಫಲ ಸಂಕೇತವನ್ನು ಸ್ವೀಕರಿಸುತ್ತದೆ. ಇದು ವರ್ತನೆಯನ್ನು ಬಲಪಡಿಸುತ್ತದೆ ಹಾಗೂ ಡಿಜಿಟಲ್ ವ್ಯಸನಕ್ಕೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದರು.
ಡೆರೆಕ್ ಓಬ್ರಾಯಾನ್ ಪ್ರಾಯೋಗಿಕ ಸಲಹೆಗಳನ್ನು ಕೂಡ ನೀಡಿದರು. ಫೋನ್ ತೆಗೆದುಕೊಳ್ಳುವ ಮೊದಲು ಏಕೆ ಎಂದು ತಮ್ಮನ್ನು ತಾವೇ ಕೇಳಿಕೊಳ್ಳಬೇಕು. ಅದನ್ನು ಮುಟ್ಟುವ ಮುನ್ನ 10ರವರೆಗೆ ಎಣಿಕೆ ಮಾಡಬೇಕು. ಮೊಬೈಲ್ ಅನ್ನು ಬೇರೆ ಕೊಠಡಿಯಲ್ಲಿ ಚಾರ್ಜ್ ಮಾಡಬೇಕು. ಮಲಗುವ ಮುನ್ನ ಕನಿಷ್ಠ ಎರಡು ಗಂಟೆಗಳ ಮೊದಲು ಮೊಬೈಲ್ ಬಳಸುವುದನ್ನು ತಪ್ಪಿಸಬೇಕು. ಫೋನ್ ಬಳಸುವ ಹಾಗೂ ಬಳಸದ ಸಮಯವನ್ನು ನಿಗದಿಪಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಸರಕಾರಕ್ಕೆ ಅವರು ಮಾಡಿದ ಮೂರು ಮುಖ್ಯ ಶಿಫಾರಸುಗಳು: ಪ್ರಜ್ಞಾಪೂರ್ವಕ ಬಳಕೆಯನ್ನು ಪ್ರೋತ್ಸಾಹಿಸುವುದು, ಆಫ್‌ಲೈನ್ ಚಟುವಟಿಕೆಗಳನ್ನು ಉತ್ತೇಜಿಸುವುದು, ಯುವಜನರ ಮಾನಸಿಕ ಆರೋಗ್ಯ ಹಾಗೂ ಡಿಜಿಟಲ್ ಯೋಗಕ್ಷೇಮದ ಕುರಿತು ವ್ಯಾಪಕ ಚರ್ಚೆಯನ್ನು ಆರಂಭಿಸುವುದು.
ಡಿಜಿಟಲ್ ವ್ಯಸನದ ಈ ಸಮಸ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಹಾಗೂ ಯುವಜನರ ಮಾನಸಿಕ ಆರೋಗ್ಯವನ್ನು ಸಂಘಟಿತವಾಗಿ ಪರಿಹರಿಸಬೇಕು ಎಂದು ಡೆರೆಕ್ ಓಬ್ರಿಯಾನ್ ಹೇಳಿದ್ದಾರೆ.

