ದುಬೈ: ಇರಾನ್ ಜತೆಗೆ ಕದನ ವಿರಾಮ ಒಪ್ಪಂದ ಮಾತುಕತೆಗೆ ಅಮೆರಿಕ ಪ್ರಯತ್ನ ನಡೆಸುತ್ತಿದ್ದರೆ, ಇನ್ನೊಂದೆಡೆ ಇಸ್ರೇಲ್, ಇರಾನ್ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ.
ಟೆಹರಾನ್ ಹೃದಯಭಾಗದಲ್ಲಿರುವ ಶಸ್ತ್ರಾಸ್ತ್ರ ತಯಾರಿಕಾ ಘಟಕವನ್ನು ಕೇಂದ್ರವಾಗಿಸಿ ಇಸ್ರೇಲ್ ಸೇನೆ ಶುಕ್ರವಾರ ವೈಮಾನಿಕ ದಾಳಿ ನಡೆಸಿದೆ.
ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿ ದಕ್ಷಿಣ ಲೆಬನಾನ್‌ನ ಬೈರೂತ್‌ನಲ್ಲೂ ಶಕ್ತವಾದ ದಾಳಿ ಮುಂದುವರಿದಿದೆ.
ಇರಾನ್ ಕೂಡ ಕೊಲ್ಲಿ ರಾಷ್ಟ್ರಗಳ ಮೇಲಿನ ದಾಳಿಯನ್ನು ಮುಂದುವರಿಸಿದೆ. ಕುವೈತ್ ಮತ್ತು ಯುಎಇನಲ್ಲೂ ಕ್ಷಿಪಣಿ ದಾಳಿ ವರದಿಯಾಗಿವೆ. ಕುವೈತ್‌ನ ಪ್ರಮುಖ ವಾಣಿಜ್ಯ ಬಂದರು ಶುವೈಖ್‌ಗೆ ಇರಾನ್ ಕ್ಷಿಪಣಿ ದಾಳಿಯಿಂದ ಹಾನಿಯಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
'ಇಸ್ರೇಲ್ ನಾಗರಿಕರ ಮೇಲೆ ದಾಳಿ ನಡೆಸಿದರೆ ಇರಾನ್ ಭಾರಿ ಬೆಲೆ ತೆತ್ತಬೇಕಾಗುತ್ತದೆ' ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲಿ ಕಾಟ್ಜ್ ಎಚ್ಚರಿಕೆ ನೀಡಿದ್ದಾರೆ.
ಒತ್ತಡ ಹೇರಲಿ: 'ಪಶ್ಚಿಮ ಏಷ್ಯಾ ಸಂಘರ್ಷದಿಂದ ಸತತ ನಾಲ್ಕನೆಯ ವಾರವೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಭಾರಿ ಏರಿಳಿತವಾಗುತ್ತಿದೆ. ಜಿ 7 ರಾಷ್ಟ್ರಗಳ ಶೃಂಗಸಭೆಯಲ್ಲಿ ಹೊರ್ಮುಜ್ ಜಲಸಂಧಿಯನ್ನು ಎಲ್ಲ ದೇಶಗಳಿಗೆ ಮುಕ್ತಗೊಳಿಸುವ ಬಗ್ಗೆ ಒತ್ತಡ ಹೇರಬೇಕು' ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಆಗ್ರಹಿಸಿದ್ದಾರೆ.
ದೂರ ಸರಿಯಿರಿ: ಐಆರ್‌ಜಿಸಿ ಎಚ್ಚರಿಕೆ
'ಅಮೆರಿಕದ ಸೇನೆ ಇರುವ ಪ್ರದೇಶಗಳಿಂದ ದೂರ ಉಳಿಯಿರಿ' ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ (ಐಆರ್‌ಜಿಸಿ) ಗಲ್ಫ್ ರಾಷ್ಟ್ರಗಳ ಜನರಲ್ಲಿ ಮನವಿ ಮಾಡಿದೆ. ಇರಾನ್ ಜತೆಗೆ ಒಪ್ಪಂದ ಮಾತುಕತೆ ಉತ್ತಮವಾಗಿ ನಡೆಯುತ್ತಿದೆ ಎಂಬ ಟ್ರಂಪ್ ಹೇಳಿಕೆಗೆ ಐಆರ್‌ಜಿಸಿ ಪ್ರತಿ ದಾಳಿಯ ತೀಕ್ಷ್ಣ ಎಚ್ಚರಿಕೆ ನೀಡಿದೆ.

