ಪ್ಯಾರಿಸ್: 'ಶಾಂತಿಪಾಲನಾ ಕಾರ್ಯಾಚರಣೆ ಮತ್ತು ನೆರವು ಪೂರೈಕೆ ವಿಚಾರಗಳಲ್ಲಿ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಗಳಾಗಬೇಕು' ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಭಿಪ್ರಾಯಪಟ್ಟರು.
ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಜಿ7 ದೇಶಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಅವರು ಗುರುವಾರ ಮಾತನಾಡಿದರು.
ಸಭೆಯಲ್ಲಿ ತಾವು ಮಾತನಾಡಿದ ಕುರಿತು ಅವರು 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
'ಜಗತ್ತಿನ ದಕ್ಷಿಣದ ದೇಶಗಳು ಎದುರಿಸುತ್ತಿರುವ ಇಂಧನ, ರಾಸಾಯನಿಕ ಮತ್ತು ಆಹಾರ ಪೂರೈಕೆ ಸವಾಲುಗಳ ಕುರಿತು ಮಾತನಾಡಿದೆ' ಎಂದು ಜೈಶಂಕರ್ ಹೇಳಿದರು. ಜೈಶಂಕರ್ ಅವರು ಸಭೆಯಲ್ಲಿ ಭಾಗವಹಿಸಿರುವ ವಿವಿಧ ದೇಶಗಳ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಜೈಶಂಕರ್ ಅವರು ಕೆನಡಾದ ವಿದೇಶಾಂಗ ಸಚಿವೆ ಅನಿತಾ ಆನಂದ್ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟಿನ ಪರಿಣಾಮಗಳ ಕುರಿತು ಚರ್ಚಿಸಿದ್ದಾರೆ. 'ವ್ಯಾಪಾರ, ಕೃಷಿ, ಖನಿಜ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಸಹಕಾರ ಇನ್ನಷ್ಟು ಗಟ್ಟಿಗೊಳಿಸುವ ಬಗ್ಗೆ ಚರ್ಚೆ ನಡೆಸಿದೆವು' ಎಂದು ಅನಿತಾ ಅವರು 'ಎಕ್ಸ್'ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

