ಕುಂಬಳೆ: ಅನಧಿಕೃತವಾಗಿ ಕೆಂಪುಕಲ್ಲು ಗಣಿಗಾರಿಕೆ ಹಾಗೂ ಕೆಂಪುಕಲ್ಲು, ಕೆಂಪುಮಣ್ಣು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಡಿವೈಎಫ್‌ಐ ನೇತಾರನೂ, ಪೈವಳಿಕೆ ಪಂಚಾಯತ್ ಸದಸ್ಯನಾದ ಜೆಕ್ಕಿ ಯಾನೆ ಸಕರಿಯ ವಿರುದ್ಧ ದಕ್ಷಿಣಕನ್ನಡ ಜಿಲ್ಲೆಯ ವಿಟ್ಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಗಣಿಗಾರಿಕೆಗಾಗಿ ಉಪಯೋಗಿ ಸಿದ ಯಂತ್ರೋಪಕರಣಗಳು, ವಾಹನಗಳು ಮೊದಲಾದವುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿ ದ್ದಾರೆ. ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮುಗುಳಿ ಎಂಬಲ್ಲಿ ಭಾರೀ ಪ್ರಮಾಣದಲ್ಲಿ ಅನಧಿಕೃತವಾಗಿ ಗಣಿಗಾರಿಕೆ ನಡೆಯುತ್ತಿದ್ದು ಅಲ್ಲಿಂದ ಕೆಂಪುಕಲ್ಲು ಹಾಗೂ ಕೆಂಪು ಮಣ್ಣು ವ್ಯಾಪಕವಾಗಿ ಸಾಗಾಟ ನಡೆಸುತ್ತಿದೆಯೆಂಬ ಆರೋಪದಂತೆ ಪೊಲೀಸರು ದಾಳಿ ನಡೆಸಿದ್ದರು. ಸಬ್‌ಇನ್‌ಸ್ಪೆಕ್ಟರ್ ರಾಮಕೃಷ್ಣರ ನೇತೃತ್ವದಲ್ಲಿ ಪೊಲೀಸರು ಕೆಂಪುಕಲ್ಲು ಗಣಿಗಾರಿಕೆ ನಡೆಯುವ ಸ್ಥಳಕ್ಕೆ ತಲುಪುತ್ತಿರುವುದನ್ನು ಕಂಡು ಕಾರ್ಮಿಕರು ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ. ಅವರ ವಿರುದ್ಧವೂ ಪೊಲೀಸರು ಕೇಸು ದಾಖಲಿಸಿದ್ದಾರೆ. ಇಲ್ಲಿ ಅನಧಿಕೃತವಾಗಿ ಕೆಂಪುಕಲ್ಲಿನ ಕ್ವಾರೆ ಕಾರ್ಯಾಚರಿಸುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಕ್ವಾರೆಯ ಸಮೀಪ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, ಅಲ್ಲಿಂದ ಭಾರೀ ಪ್ರಮಾಣದಲ್ಲಿ ಮಣ್ಣು ಸಾಗಾಟ ನಡೆಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ. ಮಣ್ಣು ಸಾಗಿಸುವ ಲಾರಿಗಳ ಭಾರ ಪರಿಶೀಲಿಸಲು ಸ್ಥಾಪಿಸಿದ್ದ ವೇ ಬ್ರಿಡ್ಜ್ ಹಾಗೂ ಅದಕ್ಕೆ ಸಂಬಂಧಪಟ್ಟ ಕಟ್ಟಡವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಸಕರಿಯ ಪೈವಳಿಕೆ ಗ್ರಾಮ ಪಂಚಾಯತ್ ಮುಳಿಗದ್ದೆ ನಿವಾಸಿಯಾಗಿ ದ್ದಾರೆ. ಘಟನೆಗೆ ಸಂಬಂಧಿಸಿ 148/2026 ನಂಬ್ರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ 303(2), ಗಣಿಗಳು, ಖನಿಜಗಳಿಗೆ ಸಂಬಂಧಿಸಿದ ಕಾನೂನು 1957ರ ಕಾಯ್ದೆ 4(1), 21, ಕರ್ನಾಟಕದ ಮೈನರ್ ಮಿನರಲ್ ರೂಲ್ಸ್ 1994ರ ಕಾಯ್ದೆ ೩, ೪೪ ಕಾಯ್ದೆಗಳ ಪ್ರಕಾರ ಕೇಸು ದಾಖಲಿಸಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.



