ನವದೆಹಲಿ: ಸುಲಲಿತ ವ್ಯವಹಾರಕ್ಕೆ ಉತ್ತೇಜನ ನೀಡುವುದಕ್ಕಾಗಿ ಸಣ್ಣ ಪುಟ್ಟ ತಪ್ಪುಗಳನ್ನು ಅಪರಾಧ ಎಂಬುದಾಗಿ ಪರಿಗಣಿಸುವುದನ್ನು ಕೈಬಿಡುವುದು ಸೇರಿ ಹಲವು ತಿದ್ದುಪಡಿಗಳನ್ನು ಪ್ರಸ್ತಾವಿಸಲಾದ 'ಜನ ವಿಶ್ವಾಸ ಮಸೂದೆ'ಯ ಎರಡನೇ ಆವೃತ್ತಿಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿದೆ.
ತಿದ್ದುಪಡಿ ತರುವುದಕ್ಕೆ ಕಾಂಗ್ರೆಸ್ ಸಂಸದರಿಂದ ವ್ಯಕ್ತವಾದ ಆಕ್ಷೇಪಗಳನ್ನು ತಿರಸ್ಕರಿಸಿದ ಸರ್ಕಾರ, 'ಜನ ವಿಶ್ವಾಸ(ಅವಕಾಶಗಳ ತಿದ್ದುಪಡಿ) ಮಸೂದೆ-2026' ಅನ್ನು ಮಂಡಿಸಿತು.
ಮಸೂದೆ ಮಂಡಿಸಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಜಿತಿನ್ ಪ್ರಸಾದ,'ಈ ಮಸೂದೆಯು 79 ಕೇಂದ್ರೀಯ ಕಾಯ್ದೆಗಳಿಗೆ ತಿದ್ದುಪಡಿ ತರುವ ಪ್ರಸ್ತಾವಗಳನ್ನು ಒಳಗೊಂಡಿದೆ. 23 ಸಚಿವಾಲಯಗಳು ಈ ತಿದ್ದುಪಡಿಗಳನ್ನು ಸೂಚಿಸಿವೆ' ಎಂದು ಸದನಕ್ಕೆ ತಿಳಿಸಿದರು.
79 ಕಾಯ್ದೆಗಳಲ್ಲಿನ 784 ಅವಕಾಶಗಳಿಗೆ ತಿದ್ದುಪಡಿ ತರಲು ಮಸೂದೆಯಲ್ಲಿ ಪ್ರಸ್ತಾವಿಸಲಾಗಿದೆ. ಈ ಪೈಕಿ, ಸಣ್ಣ ಪುಟ್ಟ ತಪ್ಪುಗಳನ್ನು ಅಪರಾಧ ಎಂದು ಪರಿಗಣಿಸುವುದನ್ನು ಕೈಬಿಡುವುದು, ಜೀವನ ನಿರ್ವಹಣೆ ಸುಗಮಗೊಳಿಸುವುದಕ್ಕೆ ನೆರವಾಗಲು 67 ಅವಕಾಶಗಳನ್ನು ಬದಲಾವಣೆ ಮಾಡುವ ಪ್ರಸ್ತಾವಗಳನ್ನು ಈ ಮಸೂದೆ ಒಳಗೊಂಡಿದೆ ಎಂದು ಹೇಳಿದರು.
ಕಾಂಗ್ರೆಸ್ ವಿರೋಧ: ಮಸೂದೆ ಮಂಡನೆಯಾಗುತ್ತಿದ್ದಂತೆ ಕಾಂಗ್ರೆಸ್ ಸಂಸದರಾದ ಕೆ.ಕಾವ್ಯ ಹಾಗೂ ಜಿ.ಕೆ.ಪಡವಿ ಆಕ್ಷೇಪ ವ್ಯಕ್ತಪಡಿಸಿದರು.
'ಕಾಯ್ದೆ ಉಲ್ಲಂಘಿಸಿದ ಸಂದರ್ಭದಲ್ಲಿ ಜೈಲು ಶಿಕ್ಷೆ ಬದಲು ದಂಡ ವಿಧಿಸಲು ಅವಕಾಶವಿರುವಂತೆ ಬದಲಾವಣೆ ಮಾಡಲಾಗುತ್ತಿದೆ. ಈ ರೀತಿಯ ತಿದ್ದುಪಡಿ ಸಂವಿಧಾನದ ಮೂಲ ರಚನೆಯ ಉಲ್ಲಂಘನೆಯಾಗಲಿದೆ' ಎಂದು ಹೇಳಿದರು. 'ಮಸೂದೆಯನ್ನು ಸದನ ಸಮಿತಿ ಇಲ್ಲವೇ ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಬೇಕು' ಎಂದು ಪಡವಿ ಒತ್ತಾಯಿಸಿದರು.
ಆಗ, 'ಮಸೂದೆಯನ್ನು ಸಂಸದೀಯ ಸಮಿತಿಗೆ ಒಪ್ಪಿಸುವುದಕ್ಕೆ ಅವಕಾಶ ಇದೆಯೇ' ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಕೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು,'ಪರಿಶೀಲನೆಗಾಗಿ ಮಸೂದೆಯನ್ನು ಸಂಸದೀಯ ಸಮಿತಿಗೆ ಮತ್ತೆ ಕಳುಹಿಸಲು ಅವಕಾಶ ಇಲ್ಲ. ಇಂತಹ ಪೂರ್ವನಿದರ್ಶನವೂ ಇಲ್ಲ' ಎಂದು ವಿವರಿಸಿದರು.
ಪ್ರಮುಖ ಅಂಶಗಳು
* ಜೀವನ ನಿರ್ವಹಣೆ ಸುಗಮವಾಗಿಸುವ ಸಂಬಂಧ ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಕಾಯ್ದೆ-1994 ಮೋಟಾರು ವಾಹನ ಕಾಯ್ದೆ-1988ರಲ್ಲಿನ ಒಟ್ಟು 67 ಅವಕಾಶಗಳಿಗೆ ತಿದ್ದುಪಡಿ ಪ್ರಸ್ತಾವ
* ಆರ್‌ಬಿಐ ಕಾಯ್ದೆ-1934 ವಿಮಾ ಕಾಯ್ದೆಗಳು ಪಿಂಚಣಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಕಾನೂನು ಮಾಪನಶಾಸ್ತ್ರ ಕಾಯ್ದೆ ಕಂಟೋನ್ಮೆಂಟ್ ಕಾಯ್ದೆ-2006 ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ-1940 ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ದೆಹಲಿ ಪೊಲೀಸ್ ಕಾಯ್ದೆ ವಿದ್ಯುತ್ ಕಾಯ್ದೆ ಹಾಗೂ ರೈಲ್ವೆ ಕಾಯ್ದೆಯಲ್ಲಿ ಕೆಲ ಬದಲಾವಣೆ ತರಲು ಪ್ರಸ್ತಾವ
* ಜನ ವಿಶ್ವಾಸ ಕಾಯ್ದೆಯ ಮೊದಲ ಆವೃತ್ತಿ ಕುರಿತು 2023ರ ಆಗಸ್ಟ್ 11ರಂದು ಅಧಿಸೂಚನೆ ಹೊರಡಿಸಲಾಗಿತ್ತು.

