ಧಾರ್: ಇಲ್ಲಿನ ಬುಡಕಟ್ಟು ಪ್ರದೇಶದಲ್ಲಿ ನಡೆದ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಮೂಲ ಭೂತ ಸೌರ್ಕರ್ಯಗಳಿಲ್ಲದೆ 175ಕ್ಕೂ ಅಧಿಕ ಮಹಿಳೆಯರಿಗೆ ಒಂದೇ ದಿನದಲ್ಲಿ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಮಧ್ಯಪ್ರದೇಶದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಕುರಿತು ಗಂಭೀರ ಪ್ರಶ್ನೆಗಳಿಗೆ ಕಾರಣವಾಗಿದೆ.
ಬಾಘ್ ಸಮುದಾಯ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕುಟುಂಬ ನಿಯಂತ್ರಣ ಶಿಬಿರದಲ್ಲಿ ಈ ಘಟನೆ ನಡೆದಿದೆ. ಸುಮಾರು 180 ಬುಡಕಟ್ಟು ಮಹಿಳೆಯರು ಬೆಳಗ್ಗೆ ಬಂದಿದ್ದರು. ಆದರೆ, ಅಲ್ಲಿ ಅವರಿಗೆ ಕುಡಿಯುವ ನೀರು, ಆಸನ, ಬೆಡ್‌ನಂತಹ ಮೂಲಭೂತ ಅವಶ್ಯಕತೆಗಳು ಕೊರತೆ ಇತ್ತು.
ಪ್ರತ್ಯಕ್ಷದರ್ಶಿಗಳು ಹಾಗೂ ಸ್ಥಳೀಯ ದಾಖಲೆಗಳ, ಪ್ರಕಾರ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಒಳಗಾದವರನ್ನು ತೆರದ ಸ್ಥಳದಲ್ಲಿ ಬಿಸಿಲಿನಲ್ಲಿ ಇನ್ನು ಕೆಲವರನ್ನು ತೇವವಿರುವ ಸ್ಥಳದಲ್ಲಿ ಮಲಗಿಸಲಾಗಿದೆ. ಬಿಸಿಲು ಹಾಗೂ ಅಸ್ವಸ್ಥತೆಯಿಂದ ಅವರು ನೋವಿನಿಂದ ನರಳುತ್ತಿದ್ದರು. ಅವರ ಕುಟುಂಬದ ಸದಸ್ಯರು ಬಟ್ಟೆಯಿಂದ ಗಾಳಿ ಬೀಸುತ್ತಿದ್ದರು.
ನಮಗೆ ಬೆಳಗ್ಗೆ 8 ಗಂಟೆಗೆ ಬರಲು ಹೇಳಲಾಗಿತ್ತು. ಆದರೆ, ಇಡೀ ದಿನ ನೀರು ಆಹಾರ ನೀಡಲಿಲ್ಲ ಎಂದು ಹಲವು ಮಹಿಳೆಯರು ಆರೋಪಿಸಿದ್ದಾರೆ.

