ಗುವಾಹತಿ: ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಕುಕಿ ಮತ್ತು ನಾಗಾ ಜನಾಂಗಗಳ ನಡುವೆ ಸಂಘರ್ಷ ಆರಂಭವಾಗಿರುವ ನಡುವೆಯೇ ಭದ್ರತಾ ಆತಂಕದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ರಾಮ್ವಾ ಜವಾಹರ್ ನವೋದಯ ವಿದ್ಯಾಲಯದಿಂದ 51 ಕುಕಿ ವಿದ್ಯಾರ್ಥಿಗಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿವೆ.
ಉಖ್ರೂಲ್ ಜಿಲ್ಲಾ ಪೊಲೀಸರು ವಿದ್ಯಾರ್ಥಿಗಳನ್ನು ಶಾಲೆಯಿಂದ ತೆರವುಗೊಳಿಸಿ, ಕಂಗ್ಪೋಕ್ಪಿ ಜಿಲ್ಲೆಗೆ ಸ್ಥಳಾಂತರಿಸುವ ಸಲುವಾಗಿ ಸೈಕುಲ್ ಪೊಲೀಸ್ ತಂಡಕ್ಕೆ ಹಸ್ತಾಂತರಿಸಿದ್ದಾರೆ. ಇದರಲ್ಲಿ 20 ಬಾಲಕಿಯರು ಮತ್ತು 31 ಬಾಲಕರು ಸೇರಿದ್ದಾರೆ. ನಾಗಾ ವಿದ್ಯಾರ್ಥಿಗಳ ಪ್ರಾಬಲ್ಯ ಇರುವ ಸ್ಥಳದಿಂದ ತೆರವುಗೊಳಿಸಿರುವ ವಿದ್ಯಾರ್ಥಿಗಳ ತಂಡವನ್ನು ಸದ್ಯಕ್ಕೆ ಅಸ್ಸಾಂ ರೈಫಲ್ಸ್ ರಕ್ಷಣೆಯಲ್ಲಿ ಇಡಲಾಗಿದೆ ಎಂದು ಮೂಲಗಳು ಹೇಳಿವೆ.
"ಜಿಲ್ಲೆಯಲ್ಲಿ ಪ್ರಸ್ತುತ ಇರುವ ಕಾನೂನು ಪರಿಸ್ಥಿತಿ ಹಿನ್ನೆಲೆಯಲ್ಲಿ 10 ಮತ್ತು 12ನೇ ತರಗತಿಯ 18 ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರವನ್ನು ಜೆಎನ್ ವಿ ಕಾಂಗ್ಪೊಕ್ಪಿಗೆ ಸ್ಥಳಾಂತರಿಸಲಾಗಿದೆ. ಇವರ ಜತೆಗೆ ರಾಮ್ವಾ ಜೆವಿಎನ್ ನಲ್ಲಿ ಇದ್ದ ಕುಕಿ ಸಮುದಾಯಕ್ಕೆ ಸೇರಿದ ಇತರ ವಿದ್ಯಾರ್ಥಿಗಳನ್ನು ಕೂಡಾ ಮುನ್ನೆಚ್ಚರಿಕೆ ಕ್ರಮವಾಗಿ ತೆರವುಗೊಳಿಸಲಾಗಿದೆ" ಎಂದು ಮಣಿಪುರ ಪೊಲೀಸರು ಎಕ್ಸ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.
ಕೆಲ ಸಾರ್ವಜನಿಕರು ಈ ಸ್ಥಳಾಂತರವನ್ನು ಕಿಡಿಗೇಡಿಗಳ ಕ್ರಮ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸುವ ನಿಟ್ಟಿನಲ್ಲಿ ಟಿಕೆಎಸ್ ಹಾಗೂ ಅದರ ವಲಯ ಘಟಕಗಳು, ಕಥೋ ಕಟಮನೋವ್ ಲಾಂಗ್ ಅಧ್ಯಕ್ಷರ ಸಹಕಾರ ಅಗತ್ಯ. ವಿದ್ಯಾರ್ಥಿಗಳನ್ನು ಸುರಕ್ಷಿತ ತೆರವುಗೊಳಿಸುವಿಕೆಗೆ ಗ್ರಾಮಸ್ಥರನ್ನು ಮನವೊಲಿಸುವ ನಿಟ್ಟಿನಲ್ಲಿ ಅವರ ಸಹಕಾರ ಪಡೆಯಲಾಗಿದೆ ಎಂದು ಹೇಳಿದ್ದಾರೆ.

