ಟೆಹ್ರಾನ್: ಯುದ್ಧದ ಸಂಪೂರ್ಣ ಅಂತ್ಯಕ್ಕೆ ಕಾರಣವಾಗುವ ಯಾವುದೇ ಉಪಕ್ರಮವನ್ನು ಇರಾನ್ ಸ್ವಾಗತಿಸುತ್ತದೆ ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ರವಿವಾರ ಹೇಳಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಇರಾನ್ ವಿವಿಧ ಗಲ್ಫ್ ದೇಶಗಳೊಂದಿಗೆ ಸಂವಹನ ನಡೆಸುತ್ತಿದೆ ಮತ್ತು ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಯುದ್ಧಕ್ಕೆ ಸಂಪೂರ್ಣ ಅಂತ್ಯವನ್ನು ಖಾತರಿಪಡಿಸುವ ಯಾವುದೇ ಉಪಕ್ರಮವನ್ನು ಸ್ವಾಗತಿಸುತ್ತದೆ.
ಪ್ರಾದೇಶಿಕ ಸ್ಥಿರತೆಗೆ ಇರಾನ್ನ ಬದ್ಧತೆಯ ಪ್ರತೀಕವಾಗಿ ಶಾಂತಿ ಪ್ರಸ್ತಾಪವನ್ನು ಮುಂದಿರಿಸಿರುವುದಾಗಿ ಅರಾಘ್ಚಿ ಪ್ರತಿಪಾದಿಸಿದ್ದಾರೆ. ಇರಾನ್ ಈ ಪ್ರದೇಶದಲ್ಲಿ ನಾಗರಿಕ ಸ್ಥಳಗಳ ಮೇಲೆ ಪ್ರಹಾರ ಮಾಡಿದೆ ಎಂಬ ಆರೋಪವನ್ನು ತಿರಸ್ಕರಿಸಿದ ಅವರು, ಕೆಲವು ಅರಬ್ ರಾಷ್ಟ್ರಗಳಲ್ಲಿ ನಾಗರಿಕ ಗುರಿಗಳ ಮೇಲಿನ ದಾಳಿಗಳ ಹಿಂದೆ ಇಸ್ರೇಲ್ ಇರುವ ಸಾಧ್ಯತೆಯಿದೆ. ಇಂತಹ ದಾಳಿಗಳಿಗೆ ಹೊಣೆಗಾರಿಕೆಯನ್ನು ಗುರುತಿಸಲು ನೆರೆಹೊರೆಯವರೊಂದಿಗೆ ಸಮಿತಿಯನ್ನು ರಚಿಸಲು ಇರಾನ್ ಸಿದ್ಧವಿದೆ ಎಂದು ಹೇಳಿದ್ದಾರೆ.

