ನವದೆಹಲಿ: ಗೃಹ ಬಳಕೆಯ ಸಿಲಿಂಡರ್ ಮರುಪೂರಣ(ರಿಫಿಲಿಂಗ್) ಅವಧಿಯನ್ನು 25ರಿಂದ 35 ದಿನಗಳವೆರೆಗೆ ಹೆಚ್ಚಿಸಲಾಗಿದೆ ಎಂಬ ವರದಿಗಳನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಳ್ಳಿಹಾಕಿದೆ.
ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರವ ಸಚಿವಾಲಯವು, ಅಸ್ತಿತ್ವದಲ್ಲಿರುವ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.
'ಎಲ್‌ಪಿಜಿ ರಿಫಿಲ್ ನಿಯಮಗಳಲ್ಲಿನ ಬದಲಾವಣೆಗಳ ಬಗ್ಗೆ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಗಳು ಸುಳ್ಳು. ನಗರ ಪ್ರದೇಶಗಳಲ್ಲಿ ಒಂದು ಸಿಲಿಂಡರ್ ಖರೀದಿಸಿದ 25 ದಿನಗಳ ನಂತರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳ ನಂತರ ಮತ್ತೊಂದು ಸಿಲಿಂಡರ್ ಪಡೆಯಬಹುದು' ಎಂದು ತಿಳಿಸಿದೆ.
ಬೇಡಿಕೆಯನ್ನು ಪೂರೈಸಲು ಸಾಕಷ್ಟು ಎಲ್‌ಪಿಜಿ ಲಭ್ಯವಿದೆ ಎಂದು ಭರವಸೆ ನೀಡಿರುವ ಸಚಿವಾಲಯ, ಗ್ರಾಹಕರು ಆತಂಕದಿಂದ ಬುಕಿಂಗ್ ಮಾಡಬಾರದು ಎಂದು ಮನವಿ ಮಾಡಿದೆ.
ಪೂರೈಕೆಯ ಮಿತಿಯನ್ನು ನಿರ್ವಹಿಸುವ ಕ್ರಮವಾಗಿ ಕೇಂದ್ರ ಸರ್ಕಾರವು ಎಲ್‌ಪಿಜಿ ಮರುಪೂರಣ ಅವಧಿಯನ್ನು 25ರಿಂದ 35 ದಿನಗಳಿಗೆ ಹೆಚ್ಚಿಸಿದೆ ಎಂಬ ವರದಿಗಳು ವ್ಯಾಪಕವಾಗಿ ಹರಿದಾಡಿತ್ತು. ಇದರ ಬೆನ್ನಲ್ಲೇ ಸಚಿವಾಲಯದಿಂದ ಈ ಸ್ಪಷ್ಟನೆ ಬಂದಿದೆ .

