ಶ್ರೀನಗರ: ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಜಂಟಿ ದಾಳಿಗೆ ತತ್ತರಿಸಿರುವ ಇರಾನ್‌ಗೆ ನೆರವು ಒದಗಿಸುವ ನಿಟ್ಟಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಜನತೆ ದೇಣಿಗೆ ಸಂಗ್ರಹಿಸಿದ್ದಾರೆ.
ಕಾಶ್ಮೀರದ ವಿವಿಧ ಪ್ರಾಂತ್ಯಗಳಲ್ಲಿ ದೇಣಿಗೆ ಸಂಗ್ರಹಿಸಿದ್ದು, ಇದರಲ್ಲಿ ನಗದು, ಚಿನ್ನ ಮತ್ತು ತಾಮ್ರದ ಪಾತ್ರೆಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈದ್ ಆಚರಣೆಯ ಒಂದು ದಿನದ ನಂತರ, ಭಾನುವಾರ (ಮಾರ್ಚ್ 22, 2026) ಕಾಶ್ಮೀರ ಕಣಿವೆಯ ಶಿಯಾ ಪ್ರಾಬಲ್ಯದ ಪ್ರದೇಶಗಳಲ್ಲಿ ಯುವಕರು ದೇಣಿಗೆ ಸಂಗ್ರಹಿಸಲು ಮನೆ ಮನೆಗೆ ತೆರಳಿದ್ದರು.
ಯುದ್ಧಪೀಡಿತ ಇರಾನ್ ಪರಿಹಾರ ನಿಧಿಗಾಗಿ ಕಾಶ್ಮೀರದ ಜನರು ದೇಣಿಗೆ ನೀಡಿದ ವಸ್ತುಗಳಲ್ಲಿ ನಗದು, ಚಿನ್ನ ಮತ್ತು ತಾಮ್ರದ ಪಾತ್ರೆಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಜನರು ದೇಣಿಗೆ ಅಭಿಯಾನದಲ್ಲಿ ಭಾಗವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷವಾಗಿ ಮಹಿಳೆಯರು ಮುಂದೆ ಬಂದು ಚಿನ್ನದ ಆಭರಣಗಳು, ತಾಮ್ರದ ಪಾತ್ರೆಗಳು ಮತ್ತು ಇತರೆ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ.
ಇಸ್ರೇಲ್‌ನ ಆಡಳಿತ ಮತ್ತು ಅದರ ಬೆಂಬಲಿಗರು ಇರಾನ್ ಮೇಲೆ ನಡೆಸುತ್ತಿರುವ ಕಾನೂನುಬಾಹಿರ ಯುದ್ಧದಿಂದ ಭಾರಿ ಹಾನಿ ಆಗಿದೆ. ನಾಗರಿಕ ಜಗತ್ತು ಮಾಡಬಹುದಾದ ಕನಿಷ್ಠ ಕೆಲಸವೆಂದರೆ ಇರಾನ್‌ನ ಬಳಲುತ್ತಿರುವ ಜನರಿಗೆ ಸಹಾಯ ಕಳುಹಿಸುವುದು ಎಂದು ರೈನಾವರಿ ನಿವಾಸಿ ಐಜಾಜ್ ಅಹ್ಮದ್ ದೇಣಿಗೆ ವಿತರಣೆಯ ಸಂದರ್ಭದಲ್ಲಿ ಮಾತನಾಡಿದರು.
ಕಾಶ್ಮೀರ ಜನತೆಗೆ ಆಭಾರಿ ಎಂದ ಇರಾನ್ ರಾಯಭಾರ ಕಚೇರಿ
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ತಿಳಿಸಿರುವ ಇರಾನ್ ರಾಯಭಾರ ಕಚೇರಿ, ನಿಮ್ಮ ಈ ಮಾನವೀಯತೆಯ ಕಾರ್ಯವನ್ನು ಎಂದಿಗೂ ಮರೆಯುವುದಿಲ್ಲ ಎಂದಿದೆ.

