ಬುಡೌನ್: ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯ ರೈತರೊಬ್ಬರಿಗೆ ₹14.66 ಕೋಟಿಯ ತೆರಿಗೆ ನೋಟಿಸ್ ಬಂದಿದ್ದು, ದೆಹಲಿಯ ಕಂಪನಿಯೊಂದು ರೈತನ ಹೆಸರು ಮತ್ತು ಗುರುತನ್ನು ದುರ್ಬಳಕೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ರೈತನ ದೂರನ್ನು ಆಧರಿಸಿ ತನಿಖೆಗಾಗಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಹಣಕಾಸು) ಮತ್ತು ಉಪ ಆಯುಕ್ತರನ್ನು(ಜಿಎಸ್ಟಿ) ಒಳಗೊಂಡ ಇಬ್ಬರು ಸದಸ್ಯರ ತಂಡವನ್ನು ರಚಿಸಲಾಗಿದೆ ಎಂದು ಬುಡೌನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವನೀಶ್ ರೈ ಶನಿವಾರ ತಿಳಿಸಿದ್ದಾರೆ.
ರೈತನ ಹೆಸರಿನಲ್ಲಿ ದೆಹಲಿಯ ನರೈನಾ ಕೈಗಾರಿಕಾ ಪ್ರದೇಶದಲ್ಲಿ ರಾಮ್ ಸ್ಟೋರ್ ಎಂಬ ಕಂಪನಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಂಪನಿಯು ₹1.0a2 ಕೋಟಿ ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ನೋಟಿಸ್ ನನಗೆ ಬಂದಿದೆ ಎಂದು ರೈತ ಭೋಲಾ ಸಿಂಗ್ ಹೇಳಿದ್ದಾರೆ.
ಈ ಮಧ್ಯೆ, ಜಿಎಸ್ಟಿ ಕಚೇರಿಯು ₹13.63 ಕೋಟಿಗಳ ಸರಕು ಮತ್ತು ಸೇವಾ ತೆರಿಗೆ ಉಲ್ಲೇಖಿಸಿ ನೋಟಿಸ್ ನೀಡಿದೆ ಎಂದೂ ಅವರು ತಿಳಿಸಿದ್ದಾರೆ.
ವಜೀರ್ಗಂಜ್ ಪ್ರದೇಶದ ಖುರ್ರಾಮ್ಪುರ ಭಮೋರಿಯ ನಿವಾಸಿ ಸಿಂಗ್, ನಾನು ಎಂದೂ ದೆಹಲಿಗೆ ಹೋಗಿಲ್ಲ. ದೆಹಲಿಯಲ್ಲಿ ಯಾವುದೇ ಕಂಪನಿ ಆರಂಭಿಸಿಲ್ಲ ಎಂದಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಗೆ ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ಧಾರೆ. ಜಿಎಸ್ಟಿ ಅಧಿಕಾರಿಗಳ ತನಿಖೆಯಲ್ಲಿ ಕಂಪನಿಯು ರೈತನ ಆಧಾರ್ ಮತ್ತು ಪ್ಯಾನ್ ಕಾರ್ಡ್ ದುರ್ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.

