ತಿರುವನಂತಪುರ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ತನ್ನ ಮುಂದಿನ ಉಡಾವಣೆಗಾಗಿ ಕೆಲಸ ಮಾಡುತ್ತಿದೆ. ಹೊಸ ಹಣಕಾಸು ವರ್ಷದಲ್ಲಿ ಹಲವಾರು ಕಾರ್ಯಾಚರಣೆಗಳು ಈ ಸಾಲಿನಲ್ಲಿವೆ ಎಂದು ಅಧ್ಯಕ್ಷ ವಿ.ನಾರಾಯಣನ್ ಶನಿವಾರ ತಿಳಿಸಿದ್ದಾರೆ.
ಕೇರಳದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಗಳ ಸಂಸ್ಥೆ(ಐಇಇಇ) ನೀಡುವ ಕೆಪಿಪಿ ನಂಬಿಯಾರ್ ಪ್ರಶಸ್ತಿ 2025 ಅನ್ನು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ತಕ್ಷಣದ ಉಡಾವಣೆಗಳಿಗೆ ತಯಾರಿ ನಡೆಸುತ್ತಿದ್ದೇವೆ.
ಹಣಕಾಸು ವರ್ಷ ಪ್ರಾರಂಭವಾಗುತ್ತಿದ್ದಂತೆ, ಹಲವಾರು ಕಾರ್ಯಾಚರಣೆಗಳನ್ನು ಯೋಜಿಸಲಾಗಿದೆ ಎಂದ ಅವರು ಯಾವುದೇ ನಿರ್ದಿಷ್ಟ ಕಾರ್ಯಾಚರಣೆಗಳನ್ನು ಹೆಸರಿಸಲು ನಿರಾಕರಿಸಿದ್ದಾರೆ.
ಗಗನಯಾನ ಮಿಷನ್ಗೆ ಸಂಬಂಧಿಸಿದ ಇಂಟಿಗ್ರೇಟೆಡ್ ಏರ್ ಡ್ರಾಪ್ ಟೆಸ್ಟ್-2(ಐಎಡಿಟಿ-2) ಕುರಿತು ನಿರ್ದಿಷ್ಟ ದಿನಾಂಕವನ್ನು ದೃಢೀಕರಿಸದಿದ್ದರೂ, ಯೋಜನೆಯಂತೆ ಕೆಲಸ ಪ್ರಗತಿಯಲ್ಲಿದೆ ಎಂದು ನಾರಾಯಣನ್ ಹೇಳಿದ್ದಾರೆ.
ಪಿಎಸ್ಎಲ್ವಿ-ಸಿ62 ಕಾರ್ಯಾಚರಣೆಯ ವೈಫಲ್ಯವನ್ನು ತನಿಖೆ ಮಾಡಲು ರಚಿಸಲಾದ ಕೆ. ವಿಜಯ್ ರಾಘವನ್ ಸಮಿತಿಯು ಕಾರ್ಯನಿರ್ವಹಿಸುತ್ತಿದೆ. ಶೀಘ್ರದಲ್ಲೇ ವರದಿ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಗಗನಯಾನ ಯೋಜಯಡಿ ಭಾರತದ ಮಾನವ ಬಾಹ್ಯಾಕಾಶಯಾನದ ಪ್ರಯತ್ನಗಳ ಕುರಿತು ಮಾಹಿತಿ ಹಂಚಿಕೊಂಡ ಅವರು, ಸುಮಾರು ನಾಲ್ಕು ಕಿಲೋಮೀಟರ್ ಎತ್ತರದಲ್ಲಿ ವಿಶೇಷ ಮಾಡ್ಯೂಲ್ಗಳ ಪರೀಕ್ಷೆ, ಗಗನಯಾನಿಗಳ ತರಬೇತಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಚಂದ್ರನ ಪರಿಶೋಧನೆಯ ಕುರಿತು, ಎಂಜಿನ್-ಸಂಬಂಧಿತ ಅಭಿವೃದ್ಧಿಗಳು ಮತ್ತು ಇತರ ಪ್ರಮುಖ ಘಟಕಗಳನ್ನು ಒಳಗೊಂಡಂತೆ ಚಂದ್ರಯಾನ-3 ನಂತರದ ಭವಿಷ್ಯದ ಕಾರ್ಯಾಚರಣೆಗಳ ಕೆಲಸ ಪ್ರಗತಿಯಲ್ಲಿದೆ ಎಂದರು.
ಪ್ರಧಾನ ಮಂತ್ರಿಯವರ ದೃಷ್ಟಿಕೋನ ಮತ್ತು ಮಾರ್ಗದರ್ಶನದಲ್ಲಿ ಎಲ್ಲ ಚಟುವಟಿಕೆಗಳು ಯೋಜಿಸಿದಂತೆ ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.
ಚಂದ್ರನ ಅಂಗಳಕ್ಕೆ ಮತ್ತೆ ಮಾನವನನ್ನು ಇಳಿಸುವ ನಾಸಾದ ಆರ್ಟಿಮಿಸ್ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಯತ್ನದ ಚಂದ್ರನ ಸಂಶೋಧನೆಯಲ್ಲಿ ಮತ್ತೊಂದು ಹೆಜ್ಜೆಯಾಗಿದ್ದು, ಯಶಸ್ವಿಯಾಗಲಿದೆ ಎಂದರು.

