ಇಸ್ಲಾಮಾಬಾದ್: ಪಾಕಿಸ್ತಾನದ ಮದ್ಯಸ್ಥಿಕೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರ ತಾತ್ಕಾಲಿಕ ಕದನ ವಿರಾಮ ಜಾರಿಯಲ್ಲಿದ್ದು, ಶಾಂತಿ ಮಾತುಕತೆಯ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ಎರಡು ದಿನಗಳ ರಜೆ ಘೋಷಿಸಲಾಗಿದೆ.
ಇಸ್ಲಾಮಾಬಾದ್ ಜಿಲ್ಲಾಡಳಿತವು ಏಪ್ರಿಲ್ 9 ಮತ್ತು 10ರಂದು ರಾಜಧಾನಿಯಲ್ಲಿ ರಜಾದಿನಗಳನ್ನು ಘೋಷಿಸಿದೆ ಎಂದು ಉಪ ಆಯುಕ್ತ ಇರ್ಫಾನ್ ನವಾಜ್ ಮೆಮನ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ, 'ಏಪ್ರಿಲ್ 9 ಮತ್ತು 10ರಂದು ಇಸ್ಲಾಮಾಬಾದ್‌ನಲ್ಲಿ ರಜಾದಿನಗಳನ್ನು ಘೋಷಿಸಲಾಗಿದೆ. ಇಸ್ಲಾಮಾಬಾದ್ ಪೊಲೀಸ್, ಇಸ್ಲಾಮಾಬಾದ್ ವಿದ್ಯುತ್ ಸರಬರಾಜು ಕಂಪನಿ, ಗ್ಯಾಸ್ ಪೈಪ್‌ಲೈನ್ಸ್ ಲಿಮಿಟೆಡ್, ಆಸ್ಪತ್ರೆಗಳು ಸೇರಿದಂತೆ ಅಗತ್ಯ ಸೇವೆಗಳು ಮಾತ್ರವೇ ಕಾರ್ಯನಿರ್ವಹಿಸಲಿವೆ' ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಪಶ್ಚಿಮ ಏಷ್ಯಾದ ರಾಷ್ಟ್ರವಾದ ಇರಾನ್ ಅನ್ನು ಭೂಪಟದಿಂದ ಅಳಿಸಿಹಾಕುವುದಾಗಿ ಗುಡುಗಿದ್ದ ಟ್ರಂಪ್ ಇದ್ದಕ್ಕಿದ್ದ ಹಾಗೆ ಕದನ ವಿರಾಮ ಘೋಷಿಸಿದರು. ಇದರ ಹಿಂದೆ ಪಾಕಿಸ್ತಾನದ ರಾಜತಾಂತ್ರಿಕತೆ ಕೆಲಸ ಮಾಡಿದೆ. ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹಾಗೂ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ನಡುವೆ ಮುನೀರ್ ಮಥ್ಯಸ್ಥಿಕೆ ವಹಿಸಿದ್ದರು.

