ಶ್ರೀನಗರ: ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಮಂಗಳವಾರ ಭಾರಿ ಮಳೆಯಿಂದಾಗಿ, ವಸತಿ ನಿಲಯದಲ್ಲಿ ಸಿಲುಕಿದ್ದ 30 ವಿದ್ಯಾರ್ಥಿಗಳು ಮತ್ತು ನಾಲ್ವರು ಶಿಕ್ಷಕರು ಸೇರಿದಂತೆ 34 ಮಂದಿಯನ್ನು ಸೇನಾ ಯೋಧರು ರಕ್ಷಿಸಿದ್ದಾರೆ.
'ನಿರಂತರ ಹಾಗೂ ಭಾರಿ ಮಳೆ ಸುರಿದ ಪರಿಣಾಮ ರಫಿಯಾಬಾದ್‌ನ ವತರ್ಗಮ್ ಪ್ರದೇಶದ ತೊರೆಯೊಂದರಲ್ಲಿ ನೀರಿನ ಮಟ್ಟ ದಿಢೀರನೆ ಏರಿಕೆಯಾಯಿತು.
ತೊರೆಯ ನೀರು ಸಮೀಪದಲ್ಲಿದ್ದ ಶಾಲೆಯ ವಸತಿ ನಿಲಯಕ್ಕೆ ನುಗ್ಗಿತು. ಮಕ್ಕಳು ಮತ್ತು ಶಿಕ್ಷಕರು ವಸತಿ ನಿಲಯದ ಆವರಣದಲ್ಲಿ ಸಿಲುಕಿಕೊಂಡಿದ್ದರು' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರು ಅಲ್ಲೇ ಬೀಡುಬಿಟ್ಟಿದ್ದ ಸೇನಾ ಘಟಕಕ್ಕೆ ಮಾಹಿತಿ ನೀಡಿದರು. ಸೇನೆಯವರು ತ್ವರಿತವಾಗಿ ನೆರವು ಕಾರ್ಯಾಚರಣೆ ಕೈಗೊಂಡರು. 'ನೀರಿನ ಮಟ್ಟ ಅಪಾಯಕಾರಿ ಹಂತ ತಲುಪಿತ್ತು. ಅದರ ನಡುವೆಯೂ, ವಸತಿ ನಿಲಯದಲ್ಲಿ ಸಿಲುಕ್ಕಿದ್ದವರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಲ್ಲಿ ಸೇನಾ ತಂಡವು ಯಶಸ್ವಿಯಾಯಿತು' ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

